ಕೊಟ್ಟಾಯಂ : ಕೇರಳದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿಧ್ಯಾರ್ಥಿನಿಯರಿಗೆ 60 ದಿನಗಳ ಮೆಟರ್ನಿಟಿ ರಜೆ ನೀಡಲು ತೀರ್ಮಾನಿಸಿದೆ.
ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ಸ್ನಾತಕ (ಯುಜಿ) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿನಿಯರಿಗೆ ಈ ಅವಕಾಶ ನೀಡಲಿದೆ. ವಿವಿಯ ಕುಲಪತಿ ಸಿ.ಟಿ ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಮಾತೃತ್ವ ರಜೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುವುದನ್ನು ತಡೆಯಬಹುದಾಗಿದೆ ಎಂದು ವಿವಿ ತಿಳಿಸಿದೆ.
ವಿದ್ಯಾರ್ಥಿನಿಯ ವ್ಯಾಸಂಗದ ಅವಧಿಯಲ್ಲಿ ಒಂದನೇ ಅಥವಾ ಎರಡನೇ ಹೆರಿಗೆ ಸಂದರ್ಭದಲ್ಲಿ ಮಾತ್ರ ಒಂದು ಸಲ 60 ದಿನ ರಜೆ ತೆಗೆದುಕೊಳ್ಳಬಹುದು ಎಂದು ವಿವಿ ತಿಳಿಸಿದೆ. ವ್ಯಾಸಂಗದ ಅವಧಿಯಲ್ಲಿ ಒಂದು ಭಾರಿ ಮಾತ್ರ ಇದು ಅನ್ವಯವಾಗುತ್ತದೆ. ಅಲ್ಲದೇ ಈ ರಜೆಗಳನ್ನು ಹೆರಿಗೆ ಮುಂಚಿತವಾಗಿಯಾದರೂ ತೆಗೆದುಕೊಳ್ಳಬಹುದು ಅಥವಾ ಹೆರಿಗೆ ನಂತರವಾದರೂ ತೆಗೆದುಕೊಳ್ಳಬಹುದು. ಸಾರ್ವಜನಿಕ ಹಾಗೂ ಸಾಮಾನ್ಯ ರಜೆಗಳೂ ಸೇರಿದಂತೆ ಒಟ್ಟು 60 ದಿನ ಎಂದು ತಿಳಿಸಿದೆ. ಗರ್ಭಪಾತ ಸಂಭವಿಸಿದರೆ 14 ದಿನ ರಜೆ ನೀಡಲಾಗುತ್ತದೆ. ಮಾತೃತ್ವ ರಜೆ ತೆಗೆದುಕೊಂಡರೆ, ಮುಂದಿನ ಸೆಮಿಸ್ಟರ್ ಜೊತೆ ಉಳಿಕೆಯಾದ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ವಿವಿಯ ಪ್ರಕಟಣೆ ತಿಳಿಸಿದೆ.