ದಾವಣಗೆರೆ: ಪ್ರೀತಿ ನಿರಾಕರಿಸಿದ್ದ ಯುವತಿಯನ್ನು ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಯುವಕ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಗುರುವಾರ ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವಕನೂ ಮೃತಪಟ್ಟಿದ್ದಾನೆ.
ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಸಾದತ್ ಅಲಿಯಾಸ್ ಚಂದ್ ಪೀರ್ (29) ಎಂದು ಗುರುತಿಸಲಾಗಿದೆ. ಗುರುವಾರ ದಾವಣಗೆರೆ ನಗರದ ಪಿಜೆ ಬಡಾವಣೆ ಚರ್ಚ್ ಬಳಿ ಆತ ಯುವತಿ ಚಾಂದ್ ಸುಲ್ತಾನಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.