December 27, 2024
Untitled-1

ಉಡುಪಿ: ಮನೆಯವರು ಮೆಹಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕಂಗಿತ್ತು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂದ ಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್‌ (34) ಹಾಗು ಕಳ್ಳತನಕ್ಕೆ ಸಹಕರಿಸಿದ ಆರೋಪದಲ್ಲಿ ಶಿಬಾ (39) ಎಂಬಾಕೆ ಬಂಧನಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.

ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್‌ ಆಂಚನ್‌ ಅವರ ಮನೆಯಲ್ಲಿ ಡಿಸೆಂಬರ್ 3ರಂದು ಈ ಕಳವು ಪ್ರಕರಣ ನಡೆದಿತ್ತು. ಅಂದು ಮನೆಯ ಗಾದ್ರೆಜ್‌ನಲ್ಲಿ ಇರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಬಂಧಿತರಾದ ಇಬ್ಬರು ಆರೋಪಿ ಗಳಿಂದ ಕಳ್ಳತನವಾಗಿದ್ದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಪ್ರಸಾದ್‌ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್‌ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು.ಕಳ್ಳತನವಾದ ಮನೆಯ ಮಾಲಕಿ ಉಷಾ ಅಂಚನ್‌ ಹಾಗೂ ಕಳ್ಳತನಕ್ಕೆ ಸಹಕರಿಸಿದ ಶಿಬು ಹಲವು ವರ್ಷಗಳ ಪರಿಚಯಸ್ಥರು. ಆಪ್ತ ಸ್ನೇಹಿತರು. ಇಬ್ಬರ ಮನೆಗಳ ನಡುವಿನ ಅಂತರ ಸುಮಾರು 50 ಮೀ. ದೂರವಷ್ಟೆ ಇರುವುದು.ಮೊದಲಿನಿಂದಲೂ ಅವರಿಬ್ಬರು ಜತೆಯಾಗಿ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು.ಕಳ್ಳತನವಾದ ದಿನ ರಾತ್ರಿ ಇಬ್ಬರು ಜತೆಯಾಗಿ ಪರಿಸರದಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು.

ಈ ಮೊದಲು ತೆರಳುವಾಗ ಸ್ಕೂಟಿಯಲ್ಲಿ ತೆರಳುತಿದ್ದರು. ಅವತ್ತು ನಾವು ನಡೆದಾಡಿಕೊಂಡು ಆರಾಮವಾಗಿ ಮಾತಾಡಿಕೊಂಡು ಹೋಗುವ ಅಂದಿದ್ದಳು. ಆಕೆಯ ಮರುಳು ಮಾತಿಗೆ ಉಷಾ ಒಪ್ಪಿ ನಡೆದುಕೊಂಡೆ ಇಬ್ಬರು ಇನ್ನಿತರರ ಜತೆ ಸೇರಿ ಹೋಗಿದ್ದರು. ದೊಡ್ಡ ಕರಿಮಣಿ ಹಾಕುವುದು ಬೇಡವೆಂದೂ ಶಿಬಾ ಹೇಳಿದ್ದಳು. ಅದರಂತೆ ಅದನ್ನು ಮನೆಯಲ್ಲೇ ಇರಿಸಿ ಸಣ್ಣ ಕರಿಮಣಿ ಹಾಕಿದ್ದರು. ಮೊದಲೇ ಯೋಜನೆ ರೂಪಿಸಿದ್ದ ಶಿಬಾ ಇನ್ನೊಂದು ಕಡೆ ಸಂಬಂದಿ ಪ್ರಸಾದ್‌ಗೆ ಮಾಹಿತಿ ನೀಡಿದ್ದಳು. ಆಕೆಯ ಮಾಹಿತಿ ಆಧರಿಸಿ ಆತ ಕಳ್ಳತನಗೈದಿದ್ದ. ಕಳ್ಳತನವಾದ ಬಳಿಕವೂ ಆರೋಪಿತೆ ಶಿಬು ನಾಟಕವಾಡಿದ್ದಳು. ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಹಾಕೆ ಮಚ್ಚಿಂದ್ರ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.