ಬೆಳ್ತಂಗಡಿ : ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ಒಂದೇ ಕುಟುಂಬದ ಇಬ್ಬರ ಮೃತದೇಹ ಮನೆ ಅಂಗಳದಲ್ಲಿ ಪತ್ತೆಯಾಗಿದ್ದು ಕಾಡಿನ ವಿಷ ಪೂರಿತ ಅಣಬೆಯ ಸೇವನೆಯೇ ಸಾವಿಗೆ ಕಾರಣ ಎಂದು ಸಂಶಯಿಸಲಾಗಿದೆ.
ಮೃತರನ್ನು ಪಲ್ಲದಪಲ್ಕೆ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಬಡ ಕುಟುಂಬದ ಮನೆಯಲ್ಲಿ ಮನೆ ಯಾಜಮಾನ ಗುರುವ ಸಹಿತ ಇಬ್ಬರು ಪುತ್ರರು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹೀಗಾಗಿ ಅಣಬೆ ಸೇವನೆಯ ಪದಾರ್ಥ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಅವಘಡ ತಪ್ಪಿದೆ. ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿದ್ದು. ತನಿಖೆ ಬಳಿಕ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.