ಮಂಗಳೂರು: ಜಮೀನು ಖಾತೆ ಬದಲಾವಣೆ ಮಾಡಲು 20 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆಯೇ ಲೋಕಾಯುಕ್ತ ದಾಳಿ ನಡೆಸಿ ಕೌಕ್ರಾಡಿ ಗ್ರಾಪಂ ಪಿಡಿಒನನ್ನು ಬಂಧಿಸಿದೆ. ಕೌಕ್ರಾಡಿ ಗ್ರಾಪಂ ಪಿಡಿಒ ಮಹೇಶ್ ಜಿ.ಎನ್. ಲಂಚ ಪಡೆದು ಸಿಕ್ಕಿಬಿದ್ದ ಆರೋಪಿ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಕೌಕ್ರಾಡಿಯಲ್ಲಿರುವ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿ ತಮ್ಮ ಹೆಸರಿಗೆ ಮಾಡಿಸಲು 2017ಕ್ಕೆ ಕೌಕ್ರಾಡಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಖಾತೆ ಬದಲಾವಣೆ ಆಗದಿರುವುದರಿಂದ 2021ರಲ್ಲಿ ಅದೇ ಗ್ರಾಮ ಪಂಚಾಯತ್‌ಗೆ ಮತ್ತೆ ಅರ್ಜಿ ಸಲ್ಲಿಸಿ, ಶುಲ್ಕವನ್ನು ಸಂದಾಯ ಮಾಡಿದ್ದರು. ಆದರೂ ಖಾತೆ ಬದಲಾವಣೆ ಆಗಿರಲಿಲ್ಲ. ಆದ್ದರಿಂದ ಜೂನ್ 20ರಂದು ಕೌಕ್ರಾಡಿ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಜಿ.ಎನ್. ಖಾತೆ ಬದಲಾವಣೆಗೆ 20,000 ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ. ಅದರಂತೆ ಜೂನ್ 22ರಂದು ದೂರುದಾರರಿಂದ ಆರೋಪಿ ಪಿಡಿಒ ಮಹೇಶ್ ಜಿ.ಎನ್. 20,000 ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ದಸ್ತಗಿರಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.