ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿಯೋರ್ವ ಬ್ಲೇಡ್‌ನಿಂದ ಗೀರಿರುವ ಆರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಇಬ್ಬರೂ ಭಿನ್ನ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಎರಡೂ ಕಡೆಯ ಮುಖಂಡರು ಆಸ್ಪತ್ರೆ ಮುಂಭಾಗ ಜಮಾಯಿಸಿದ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.
ಇವರಿಬ್ಬರು ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳು. ವಾಣಿಜ್ಯ, ಕಲಾ ವಿಭಾಗದ ವಿದ್ಯಾರ್ಥಿಗಳಾಗಿದ್ದು ಇತಿಹಾಸ ವಿಷಯ ದಲ್ಲಿ ಒಂದೇ ತರಗತಿಯ ಸಹಪಾಠಿ ಗಳಾಗಿದ್ದರು. ವಿದ್ಯಾರ್ಥಿನಿ ಮುಸ್ಲಿಂ ಸಮುದಾಯಕ್ಕೆ ಹಾಗೂ ವಿದ್ಯಾರ್ಥಿ ಹಿಂದೂ ಸಮುದಾಯಕ್ಕೆ ಸೇರಿದ್ದು ಇಬ್ಬರ ಮಧ್ಯೆ ಸಣ್ಣ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.ಮಾತಿಗೆ ಮಾತು ಬೆಳೆದು ಹರಿತವಾದ ವಸ್ತುವಿನಿಂದ ಗೀರಿದ ಗಾಯ ಉಂಟಾಗಿದ್ದು ವಿದ್ಯಾರ್ಥಿ ತನಗೆ ಚಾಕುವಿನಿಂದ ಇರಿದಿದ್ದಾನೆ ಎಂದು ವಿದ್ಯಾರ್ಥಿನಿ ದೂರಿದ್ದಾಳೆ. ಬೆಳಗ್ಗೆ ಕಾಲೇಜು ಆರಂಭಕ್ಕೆ ಮೊದಲು ಪುತ್ತೂರು ಮುಖ್ಯ ಆಂಚೆ ಕಚೇರಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಇಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿ ಅದು ತರಗತಿ ತನಕವೂ ಮುಂದುವರಿದಿದೆ ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ, ಪ್ರಥಮ ಅವಧಿಯ ತರಗತಿಯಲ್ಲಿ ಇಬ್ಬರ ನಡುವೆ ಜಗಳ ಸಂಭವಿಸಿದ್ದು ಈ ವೇಳೆ ವಿದ್ಯಾರ್ಥಿ ಹರಿತವಾದ ವಸ್ತುವಿನಿಂದ ತಿವಿದಿದ್ದಾನೆ ಎನ್ನಲಾಗಿದೆ. ಆದರೆ ಕೆಲ ವಿದ್ಯಾರ್ಥಿಗಳ ಪ್ರಕಾರ ಆತ ತಿವಿದಿಲ್ಲ. ಗಾಯ ಹೇಗೆ ಸಂಭವಿಸಿದೆ ಅನ್ನುವುದೇ ಆಶ್ಚರ್ಯಕರ ಸಂಗತಿ ಎನ್ನುತ್ತಾರೆ. ಗಾಯವು ಗಾಜು ತಗಲಿ ಆದದ್ದು ಎಂದು ಪೊಲೀಸರಿಗೆ ತಿಳಿಸುವಂತೆ ಕಾಲೇಜಿನ ಉಪನ್ಯಾಸಕಿಯೋರ್ವರು ಹೇಳಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಉಪನ್ಯಾಸಕಿ ವಿರುದ್ಧ ಪ್ರಕರಣ ದಾಖಲಿಸಿ ಕಾಲೇಜಿನಿಂದ ಅಮಾನತು ಮಾಡುವಂತೆ ವಿದ್ಯಾರ್ಥಿನಿ ಪರ ಹಾಜರಿದ್ದ ಹಲವಾರು ಮಂದಿ ಆಗ್ರಹಿಸಿದ ಘಟನೆಯೂ ನಡೆಯಿತು.