ಬೆಂಗಳೂರು : ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ‘ರಚಿತಾ ರಾಮ್’ ವಿರುದ್ಧ ದೂರು ದಾಖಲಾಗಿದ್ದು, ಬಂಧನಕ್ಕೆ ಒತ್ತಾಯಿಸಲಾಗಿದೆ.
ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ, ಈ ವರ್ಷ ಗಣರಾಜ್ಯೋತ್ಸವ ಮರೆತುಬಿಡಿ.
ಕ್ರಾಂತಿಯ ಉತ್ಸವ ಆಚರಿಸಿ ಅಷ್ಟೇ’ ಎಂದು ನಟಿ ರಚಿತಾ ರಾಮ್ ಹೇಳಿಕೆ ನೀಡಿದ್ದರು. ರಚಿತಾ ರಾಮ್ ಹೇಳಿಕೆ ಸಖತ್ ವೈರಲ್ ಆಗಿ ವ್ಯಾಪಕ ಟೀಕೆ, ಟ್ರೋಲ್ ಗೆ ಕಾರಣವಾಗಿತ್ತು, ಇದೇ ಹೇಳಿಕೆಗೆ ಸಂಬಂಧಿಸಿದಂತೆ ರಚಿತಾ ರಾಮ್ ವಿರುದ್ಧ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ದೂರು ನೀಡಲಾಗಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಈ ಬಗ್ಗೆ ಮಾತನಾಡಿದ್ದು, ಭಾರತದ ಸಂವಿಧಾನಕ್ಕೆ ನಟಿ ರಚಿತಾ ರಾಮ್ ಅವರು ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇ ಬೇಕು, ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆ ರಚಿತಾ ರಾಮ್ ವಿರುದ್ಧ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಶಿವಲಿಂಗಯ್ಯ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಜನವರಿ 26ರಂದು ತೆರೆಕಾಣುತ್ತಿದೆ. . ಗಣರಾಜ್ಯೋತ್ಸವದಂದು ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯಿದೆ. ಇನ್ನೂ, ಈ ಸಿನಿಮಾ ರಿಲೀಸ್ ಗೂ ಮುನ್ನವೇ ಹಲವು ರೀತಿಯಲ್ಲಿ ಸುದ್ದಿಯಾಗಿತ್ತು. ಇದೀಗ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಸ್ಯಾಂಡಲ್ ವುಡ್ ನಟಿ ‘ರಚಿತಾ ರಾಮ್’ ವಿರುದ್ಧ ದೂರು ದಾಖಲಾಗಿದ್ದು, ಬಂಧನಕ್ಕೆ ಒತ್ತಾಯಿಸಲಾಗಿದೆ.