ಜೈಲಿನಲ್ಲಿರುವ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ ಮತ್ತೊಂದು ವಿಡಿಯೋ ಹರಿ ಬಿಟ್ಟಿದ್ದು, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿದ್ದಾರೆ. ಅಂದ್ಹಾಗೆ, ಮಕ್ಕಿಯನ್ನ ಇತ್ತೀಚೆಗೆ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದ್ದು, ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ ನಂತ್ರ ಕಾಶ್ಮೀರದ ಬಗ್ಗೆ ಮಾತನಾಡುವ ವೀಡಿಯೊವನ್ನ ಮಕ್ಕಿ ಬಿಡುಗಡೆ ಮಾಡಿದ್ದಾನೆ.
ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿ ತನ್ನ ವೀಡಿಯೊದಲ್ಲಿ ಕಾಶ್ಮೀರವನ್ನ ‘ಪಾಕಿಸ್ತಾನದ ರಾಷ್ಟ್ರೀಯ ಸಮಸ್ಯೆ’ ಎಂದು ಹೇಳಿದ್ದು, ಲಾಹೋರ್’ನ ಕೋಟ್ ಲಖ್ಪತ್ ಜೈಲಿನಿಂದ ವೀಡಿಯೊವನ್ನ ಬಿಡುಗಡೆ ಮಾಡಿದ್ದಾನೆ. ಇನ್ನು ಅಲ್-ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್ನೊಂದಿಗೆ ಯಾವುದೇ ಸಂಬಂಧವನ್ನ ನಿರಾಕರಿಸಿದ್ದಾನೆ.
ಕಾಶ್ಮೀರದ ಜನರ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಕಾಶ್ಮೀರ ಸಮಸ್ಯೆಯನ್ನ ಪರಿಹರಿಸಬೇಕು ಎಂದು ಮಕ್ಕಿ ತಮ್ಮ ವೀಡಿಯೊದಲ್ಲಿ ಹೇಳಿದ್ದಾನೆ. ಕಾಶ್ಮೀರವು ನಮಗೆ ಪ್ರಮುಖ ವಿಷಯವಾಗಿದೆ. ನಾವು ಇದನ್ನ ಪಾಕಿಸ್ತಾನದ ರಾಷ್ಟ್ರೀಯ ವಿಷಯವೆಂದು ಪರಿಗಣಿಸುತ್ತೇವೆ ಮತ್ತು ಕಾಶ್ಮೀರದ ಜನರ ವಿರುದ್ಧದ ದೌರ್ಜನ್ಯಗಳು ಕೊನೆಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಗುಣವಾಗಿ ಅದನ್ನ ಪರಿಹರಿಸಬೇಕು ಎಂದಿದ್ದಾನೆ.