
ಗ್ರೇಟರ್ ನೋಯ್ಡಾ: ಮದುವೆಯಾಗಿ ಕೇವಲ 17 ತಿಂಗಳಾಗಿದ್ದ 25 ವರ್ಷದ ಯುವತಿಯೊಬ್ಬರು ಅತ್ತೆಯ ಮನೆಯ ಛಾವಣಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಜಲ್ಪುರಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ವರದಕ್ಷಿಣೆ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಕಣ್ಣೀರು ಹಾಕಿದ್ದಾರೆ.
ಮೃತ ಯುವತಿಯನ್ನು ದೀಪಿಕಾ ನಾರಂಗ್ ಎಂದು ಗುರುತಿಸಲಾಗಿದೆ. ಇಕೋ ಟೆಕ್-III ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. 2024ರ ಡಿಸೆಂಬರ್‌ನಲ್ಲಿ ದೀಪಿಕಾ ಅವರ ವಿವಾಹವು ರಿತಿಕ್ ತನ್ವರ್ ಎಂಬಾತನೊಂದಿಗೆ ಅದ್ಧೂರಿಯಾಗಿ ನೆರವೇರಿತ್ತು. ಮದುವೆಗಾಗಿ ದೀಪಿಕಾ ಕುಟುಂಬದವರು ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿದೆ.
“ಮದುವೆ ಸಂದರ್ಭದಲ್ಲಿ ನಾವು 11 ಲಕ್ಷ ರೂ. ನಗದು, 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪೀಠೋಪಕರಣ ಹಾಗೂ ಸ್ಕಾರ್ಪಿಯೋ ಕಾರನ್ನು ನೀಡಿದ್ದೆವು. ಆದರೂ ಅವರ ಆಸೆ ತೀರಿರಲಿಲ್ಲ. ಅವರಿಗೆ ಫಾರ್ಚುನರ್ ಕಾರು ಮತ್ತು ಹೆಚ್ಚುವರಿಯಾಗಿ 51 ಲಕ್ಷ ರೂ. ನಗದು ಬೇಕಿತ್ತಂತೆ,” ಎಂದು ದೀಪಿಕಾ ತಂದೆ ಸಂಜಯ್ ನಾರಂಗ್ ಎನ್‌ಡಿಟಿವಿ ಜೊತೆ ಮಾತುಕತೆ ವೇಳೆ ಕಣ್ಣೀರು ಹಾಕುತ್ತಾ ಭಾವುಕರಾದರು. ಮದುವೆಯಾದ 3-4 ತಿಂಗಳಲ್ಲೇ ಕಿರುಕುಳ ಆರಂಭವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಸಂಜೆ ದೀಪಿಕಾ ತನ್ನ ತಂದೆಗೆ ಅಳುತ್ತಾ ಕರೆ ಮಾಡಿ, ಪತಿ ಮತ್ತು ಅತ್ತೆ-ಮಾವ ತನಗೆ ತೀವ್ರವಾಗಿ ಹೊಡೆಯುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ವಿಷಯ ತಿಳಿದ ತಕ್ಷಣ ತಂದೆ ಸಂಜಯ್ ಅವರು ಕೆಲವು ಸಂಬಂಧಿಕರೊಂದಿಗೆ ಅಳಿಯನ ಮನೆಗೆ ಹೋಗಿ ವಿವಾದ ಬಗೆಹರಿಸಲು ಯತ್ನಿಸಿದ್ದರು. ಆದರೆ, ಅವರು ಮರಳಿದ ಕೆಲವೇ ಗಂಟೆಗಳಲ್ಲಿ ದೀಪಿಕಾ ಛಾವಣಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ದೀಪಿಕಾ ಛಾವಣಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ತಳ್ಳಿ ಕೊಲೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
“ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪತಿ ರಿತಿಕ್ ತನ್ವರ್ ಮತ್ತು ಮಾವ ಮನೋಜ್ ಅವರನ್ನು ಬಂಧಿಸಲಾಗಿದೆ,” ಎಂದು ಸೆಂಟ್ರಲ್ ನೋಯ್ಡಾದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
