ರಾಜ್ಕೋಟ್: ಶಾಲಾ ಮಕ್ಕಳೂ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಈ ಪಟ್ಟಿಗೆ ಇದೀಗ ಇನ್ನೊಂದು ಹೆಸರು ಸೇರಿಕೊಂಡಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾಳೆ.
ಗುಜರಾತ್ನ ರಾಜ್ಕೋಟ್ ಎಂಬಲ್ಲಿನ ಶ್ರೀಅಮೃತ್ಲಾಲ್ ವೀರ್ಚಂದ್ ಜಸಾನಿ ವಿದ್ಯಾಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಈ ಪ್ರಕರಣ ನಡೆದಿದೆ. ಇಲ್ಲಿನ ಎಂಟನೇ ತರಗತಿ ವಿದ್ಯಾರ್ಥಿನಿ ರಿಯಾ ಸೋನಿ ಸಾವಿಗೀಡಾದ ಬಾಲಕಿ.
ಮಂಗಳವಾರ ಬೆಳಗ್ಗೆ 7.23ಕ್ಕೆ 8ನೇ ತರಗತಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ರಿಯಾ ಸೋನಿ ಅಸ್ವಸ್ಥಗೊಂಡಿದ್ದು, ಕೂಡಲೇ ಆಕೆಯ ಪಾಲಕರಿಗೆ ಮಾಹಿತಿ ನೀಡಲಾಗಿತ್ತು. ಅವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಅಲ್ಲಿಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂಬುದಾಗಿ ವೈದ್ಯರು ಸ್ಪಷ್ಟಪಡಿಸಿದ್ದರು ಎಂಬುದಾಗಿ ಶಾಲೆಯ ಪ್ರಾಂಶುಪಾಲರು ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ ತಮ್ಮ ಪುತ್ರಿ ಆರೋಗ್ಯವಾಗಿದ್ದು, ಆಕೆಗೆ ಯಾವುದೇ ಅನಾರೋಗ್ಯ ಇರಲಿಲ್ಲ. ಶಾಲಾ ಆಡಳಿತ ಮಂಡಳಿ ಕೊಟ್ಟಿರುವ ಸ್ವೆಟರ್ ಮಕ್ಕಳನ್ನು ಈ ಕೋಲ್ಡ್ ವೇವ್ನಿಂದ ರಕ್ಷಿಸಲು ಸಮರ್ಥವಾಗಿಲ್ಲ ಎಂದು ಬಾಲಕಿಯ ಪಾಲಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಕಾರ್ಡಿಯಾಕ್ ಅರೆಸ್ಟ್ನಿಂದ ಸಾವಿಗೀಡಾಗಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಮತ್ತಷ್ಟು ತನಿಖೆಯಿಂದ ಹೊರಬರಬೇಕಾಗಿದೆ.