ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಂಗಳೂರು: ಇತ್ತೀಚೆಗೆ ಹೊಸಕೋಟೆಯ  ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಒಂದು ಪತ್ತೆಯಾಗಿತ್ತು. ಶವ ಪತ್ತೆಯಾದ 24 ಗಂಟೆಯಲ್ಲಿ ಪೊಲೀಸರು ಘಟನೆಯ ಅಸಲಿಯತ್ತನ್ನು ಪತ್ತೆ ಹಚ್ಚಿದ್ದಾರೆ.

ಜನವರಿ 6 ರಂದು ನಾಪತ್ತೆಯಾಗಿದ್ದ 30 ವರ್ಷದ ಯುವಕನನ್ನು ದುಷ್ಕರ್ಮಿಗಳು ಬೇರೆಡೆ ಕರೆದುಕೊಂಡು ಹೋಗಿ ಕೊಲೆ ಮಾಡಿ ಕೆರೆಯಲ್ಲಿ  ಶವವನ್ನು ಎಸೆದಿದ್ದರು. ಇದೀಗ ಪೊಲೀಸರು ಹಂತಕರ ಹೆಡೆಮುರಿಕಟ್ಟಿದ್ದಾರೆ. ಮೃತ ವ್ಯಕ್ತಿಯ ಕೈ ಮೇಲಿದ್ದ ಹಚ್ಚೆಯಿಂದ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 1 ರಂದು ನಂದಿನಿ ಲೇಔಟ್ ನಿವಾಸಿ ಗೋಪಾಲ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದರು. ಆದರೆ 6-7 ದಿನಗಳಾದರೂ ಅವರು ಮನೆಗೆ ವಾಪಾಸಾಗಿರಲಿಲ್ಲ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.

ಇದೇ ವೇಳೆ ಹೊಸಕೋಟೆಯ ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಅವಲಹಳ್ಳಿ ಪೊಲೀಸರು ಶವದ ಗುರುತು ಪತ್ತೆ ಕಾರ್ಯ ಪ್ರಾರಂಭಿಸಿದ್ದರು. ಮೃತದೇಹದ ಪರಿಶೀಲನೆ ವೇಳೆ ಎಡಗೈ ಮೇಲೆ ಅಮ್ಮ, ಸಾರ ಅನ್ನೋ ಹಚ್ಚೆ ಪತ್ತೆಯಾಗಿತ್ತು. ಅಲ್ಲದೇ ಬಲಗೈ ಮೇಲೆ ಯಶು ಎಂಬ ಹಚ್ಚೆಯೂ ಪತ್ತೆಯಾಗಿತ್ತು. ಕೈಯ ಒಂದೊಂದು ಬೆರಳುಗಳಲ್ಲಿ ಒಂದೊಂದೇ ಅಕ್ಷರದಂತೆ ರಾಧೆ ಎಂದು ಬರೆಯಲಾದ ಹಚ್ಚೆಯೂ ಇತ್ತು. ಇವೆಲ್ಲವನ್ನೂ ಕಂಡ ಪೊಲೀಸರಿಗೆ ಇದು ಹೆಣ್ಣಿನ ವಿಚಾರಕ್ಕೆ ನಡೆದಿರುವ ಕೊಲೆ ಎಂಬ ಸಂಶಯ ಮೂಡಿತ್ತು.

ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮುನಿಯ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಗೋಪಾಲ ಕಿಚಾಯಿಸಿದ್ದ ಎನ್ನಲಾಗಿದೆ. ಕಳೆದ 4 ವರ್ಷಗಳಿಂದ ಆರೋಪಿ ಮುನಿಯ ಪ್ರೀತಿಸುತ್ತಿದ್ದ ಹುಡುಗಿಯ ಮೇಲೆ ಗೋಪಾಲ ಕಣ್ಣು ಹಾಕಿದ್ದ. ಆಕೆಯ ಬೆನ್ನು ಬಿದ್ದಿದ್ದರಿಂದ ಮುನಿಯ ಗೋಪಾಲನ ಮೇಲೆ ಸಿಟ್ಟಾಗಿದ್ದ.

ಜನವರಿ 1 ರಂದು ಕೆಲಸಕ್ಕೆ ಹೋಗಿದ್ದ ಗೋಪಾಲನನ್ನು ಮುನಿಯ ತನ್ನ ಸ್ನೇಹಿತರೊಂದಿಗೆ ಕರೆದೊಯ್ದು ಪಾರ್ಟಿ ಮಾಡಿದ್ದ. ಬಳಿಕ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಮುನಿಯ ಗೋಪಾಲನ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆಸಿದ್ದ. ಗೋಪಾಲನ ಹತ್ಯೆ ನಡೆಸಿದ ಬಳಿಕ ದುಷ್ಕರ್ಮಿಗಳು ಹೊಸಕೋಟೆ ಅಮಾನಿಕೆರೆಗೆ ಶವವನ್ನು ಎಸೆದು ಪರಾರಿಯಾಗಿದ್ದರು.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.