

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಪೆಟ್ರೋಲ್, ಡೀಸೆಲ್ (Petrol and Diesel) ದರ ಇಳಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 2 ರೂಪಾಯಿ ಇಳಿಕೆಯಾಗಿದ್ದು, ಪರಿಷ್ಕೃತ ದರ ನಾಳೆ ಅಂದರೆ ಮಾರ್ಚ್ 15ರ ಬೆಳಗ್ಗೆ 6ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮಹಿಳಾ ದಿನಾಚರಣೆಯಂದು ಪ್ರಧಾನಿ ಮೋದಿ ಎಲ್‌ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಕಡಿತ ಮಾಡಿದ್ದರು. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿತಗೊಳಿಸಲಾಗಿದೆ. ಇದರೊಂದಿಗೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ.
ಬೆಂಗಳೂರಿನಲ್ಲಿ ಇಂದು (ಮಾರ್ಚ್ 14) ಪ್ರತಿ ಲೀಟರ್ ಪೆಟ್ರೋಲ್ ದರ 101.94 ರೂಪಾಯಿ ಹಾಗೂ ಡೀಸೆಲ್ ಬೆಲೆ 87.89 ರೂಪಾಯಿ ಇದ್ದು. ನಾಳೆ(ಮಾರ್ಚ್ 15) ಬೆಳಗ್ಗೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಲಿದೆ. ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ ಜನತೆಗೆ ಅನುಕೂಲವಾಗಲಿದೆ. ಇದರಿಂದ ಗ್ರಾಹಕರ ಪೆಟ್ರೋಲ್, ಡೀಸೆಲ್ ಬಳಕೆ ಕೂಡ ಹೆಚ್ಚಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು, ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಚಿಲ್ಲರೆ ವಲಯಗಳ ಲಾಭದಾಯಕತೆ ಹೆಚ್ಚಾಗುತ್ತದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 96.72 ರೂ.ಗೆ ಹೋಲಿಸಿದರೆ ಲೀಟರ್‌ಗೆ 94.72 ರೂ ಆಗಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ 87.62 ರೂ.ಗೆ ಮಾರಾಟವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತವು ಡೀಸೆಲ್ ಮೂಲಕ ಚಲಿಸುವ 58 ಲಕ್ಷಕ್ಕೂ ಹೆಚ್ಚು ಭಾರೀ ಸರಕುಗಳ ವಾಹನಗಳು, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳಲ್ಲಿ ಚಲಿಸುವ ಗ್ರಾಹಕರ ವೆಚ್ಚವನ್ನು ತಗ್ಗಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮೂಲಕ ತಿಳಿಸಿದೆ.