ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಬೃಹತ್ ವಿಸ್ತರಣೆಯ ಅಂಗವಾಗಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುತ್ತಿದ್ದು, ಸುಮಾರು 13,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಸಿದ್ಧವಾಗಿರುವ ಈ ಟರ್ಮಿನಲ್ 2 ಉದ್ಯಾನ ನಗರಿ ಖ್ಯಾತಿಗೆ ಮತ್ತೊಂದು ಗರಿಯಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಉದ್ಘಾಟಿಸುತ್ತಿದ್ದು, ಈ ಟರ್ಮಿನಲ್ 2 ಉದ್ಯಾನನಗರಿಯ ಕೀರ್ತಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇಷ್ಟಕ್ಕೂ ಈ ಟರ್ಮಿನಲ್ 2ನ ವಿಶೇಷತೆಗಳೇನು? ಇಲ್ಲಿದೆ ಉತ್ತರ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಹೊಸದಾಗಿ ಟರ್ಮಿನಲ್ 2, (Bengaluru Terminal 2) ಎರಡನೇ ರನ್ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಈ ಟರ್ಮಿನಲ್ 2 ವನ್ನು ‘ಗಾರ್ಡನ್ ಟರ್ಮಿನಲ್’ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದ್ದು, ಈ ಗಾರ್ಡನ್ ಬೆಂಗಳೂರನ್ನು ಭಾರತದ ಉದ್ಯಾನ ನಗರಿ ಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.
ಟರ್ಮಿನಲ್ 2 ನಲ್ಲಿ ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದ ಮುಂತಾದವುಗಳನ್ನು ಸಹ ಈ ಉದ್ಯಾನವು ಹೊಂದಿರಲಿದೆ. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2 ಅತ್ಯಂತ ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೇ ಈ ಸೌಲಭ್ಯದಿಂದ ಬೆಂಗಳೂರು ಉದ್ಯಾನ ನಗರಿ ಎಂಬುದು ಮತ್ತೆ ಸಾಬೀತಾಗಲಿದೆ.
13,000 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ!ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ ಎನ್ನಲಾಗಿದೆ. ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುತ್ತದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 25 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ.
ಅಮೆರಿಕದ ವಾಸ್ತುಶಿಲ್ಪ ಸಂಸ್ಥೆಯಿಂದ ವಿನ್ಯಾಸ!ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ಟರ್ಮಿನಲ್‌ನ ವಿನ್ಯಾಸಕ್ಕಾಗಿ ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಅನ್ನು ಆಯ್ಕೆ ಮಾಡಲಾಗಿದೆ. ಸ್ವಯಂ ಚೆಕ್-ಇನ್ ಮತ್ತು ಬ್ಯಾಗ್‌ಡ್ರಾಪ್ ಸೌಲಭ್ಯಗಳಂತಹ ಇತರ ಸೌಲಭ್ಯಗಳೊಂದಿಗೆ ಈ ಸೌಲಭ್ಯವು ಸುಂದರವಾದ ಒಳಾಂಗಣ ಉದ್ಯಾನವನ್ನು ಹೊಂದಿದೆ.