ಉಡುಪಿ: ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ.ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಿವೆ. ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಬೀದಿ ನಾಯಿಗಳು ಒಮ್ಮೇಲೆ ನುಗ್ಗಿ ಬಂದಿವೆ.
ನಾಲ್ಕೈದು ನಾಯಿಗಳು ಒಮ್ಮೆಲೇ ಅಟ್ಯಾಕ್ ಮಾಡಿದ್ದರಿಂದ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ಬಚಾವಾಗಿದ್ದಾಳೆ.
ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಹೂಡೆ ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಕಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಬೀದಿ ನಾಯಿಗಳ ಕಾಟದಿಂದ ಮುಕ್ತಿ ನೀಡುವಂತೆ ಹಲವು ದಿನಗಳಿಂದ ಮನವಿ ಮಾಡುತ್ತಿದ್ದಾರೆ.