ಬೆಂಗಳೂರು : ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಸಂಬಂಧ ಚರ್ಚೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಎಲ್ಲ ಧರ್ಮಗಳು, ಮಠಾಧೀಶರು, ಮುಖಂಡರ ಸಭೆ ಕರೆಯಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಆದಿಚುಂಚನಗಿರಿ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿ ಎಲ್ಲ ಧರ್ಮಗಳ ಪ್ರಮುಖ ಧರ್ಮ ಗುರುಗಳು, ಮುಖಂಡರಿಗೆ ಆಹ್ವಾನ ಕಳಿಸಲಾಗಿದೆ. ನೈತಿಕ ಶಿಕ್ಷಣದ ಭಾಗವಾಗಿ ಮಹಾಭಾರತ ಮತ್ತು ರಾಮಯಣ, ಭಗವದ್ಗೀತೆ ಮೌಲ್ಯಯುತ ವಿಚಾರ ಬೋಧನೆಗೆ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಆರಂಭಿಸುವುದಾಗಿ ಶಿಕ್ಷಣ ಇಲಾಖೆ ಕೆಲ ತಿಂಗಳ ಹಿಂದೆಯೇ ಘೋಷಣೆ ಮಾಡಿತ್ತು. ಹೀಗಾಗಿ ಈ ಸಂಬಂಧ ಸಮಾಜದ ಧರ್ಮಗುರುಗಳು, ಮಠಾಧೀಶರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸಲಾಗಿದೆ.