ಬೆಂಗಳೂರು : ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇಂದಿನಿಂದ ನಮ್ಮ ಬೇಡಿಕೆಗಳು ಈಡೇರುವವರಿಗೂ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಕೆಲಸಕ್ಕೆ ಹಾಜರಾಗದೆ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇವೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್‌ಡಿಪಿಆರ್ ಹೇಳಿದೆ.
ಸಂಘದ ರಾಜ್ಯಾಧ್ಯಕ್ಷ ಡಾ.ದೇವಿಪ್ರಸಾದ ಬೊಲ್ಮಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ನಾವು ಇಲಾಖೆಯ ಅಭಿವೃದ್ಧಿಗೆ ಕಳೆದ ಮೂರು ದಶಕಗಳಿಂದ ಹಗಲಿರುಳು ದುಡಿಯುತ್ತಿದ್ದೇವೆ. ಬಡ ಗ್ರಾಮ ಪಂಚಾಯತ್ ನೌಕರರಾದ ಬಿಲ್ ಕಲೆಕ್ಟರ್ಸ್, ಕ್ಲರ್ಕ್ ಕಮ್ ಡಿಇಒ, ಡಾಟಾ ಎಂಟ್ರಿ ಆಪರೇಟರ್,ವಾಟರ್‌ಮ್ಯಾನ್, ಪಂಪ್ ಚಾಲಕ, ಶುಚಿತ್ವ ನೌಕರರು ಹಾಗೂ ಅಟೆಂಡರ್‌ಗಳು ಭವಿಷ್ಯ ನಿಧಿ ಇಲ್ಲದೆ, ಆರೋಗ್ಯ ಭದ್ರತೆ ಇಲ್ಲದೆ, ಸರಿಯಾದ ವೇತನ ಶ್ರೇಣಿ ಇಲ್ಲದೆ, ಉದ್ಯೋಗ ಭದ್ರತೆ ಇಲ್ಲದೆ, ನಿವೃತ್ತ ಜೀವನಕ್ಕೆ ಭದ್ರತೆ ಇಲ್ಲದೆ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ 18 ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರು ಸೇರಿ ಹೋರಾಟವನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರಿಗೆ ಸೂಕ್ತ ಸ್ಥಾನಮಾನ ಮತ್ತು ಸವಲತ್ತುಗಳನ್ನು ನೀಡದೆ ಕೇವಲ ಕನಿಷ್ಠ ವೇತನ ನೀಡಿ ಜೀತದಾಳುಗಳಂತೆ ಹಗಲಿರುಳು ದುಡಿಸಿಕೊಳ್ಳುತ್ತಿದೆ. ಗ್ರಾಮೀಣ ಭಾಗದ ರಾಜಕೀಯ ಒತ್ತಡ, ಮೇಲಧಿಕಾರಿಗಳ ಒತ್ತಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರು ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸಿ ಒಂದು ತಿಂಗಳು ಕಳೆಯುತ್ತಾ ಬಂದರೂ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಪಂಚಾಯತ್ ನೌಕರರ ಬೇಡಿಕೆಗಳ ಕುರಿತು ಜಾಣ ಮೌನವಹಿಸಿರುವುದು ರಾಜ್ಯದ ಪಂಚಾಯತ್ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.