ಪ್ರಣತಿ ಆಚಾರ್ಯ ಇವರು ಮೂಲತಃ ಉಡುಪಿಯವರಾದ್ದು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಮುಗಿಸಿ ಈಗ ಅಮೆರಿಕನ್ ಮಲ್ಟಿ ನ್ಯಾಷನಲ್ ಕಂಪನಿ ಡಿಎಸ್ ಸಿ ಟೆಕ್ನಾಲಜಿಯ ಬೆಂಗಳೂರು ಶಾಖೆಯಲ್ಲಿ ತಮ್ಮ ಉದ್ಯೋಗವನ್ನು ಸಲ್ಲಿಸುತ್ತಿದ್ದಾರೆ.
ಇವರು ಕಳೆದ 15 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯಲ್ಲಿ ತಮ್ಮ ಭರತನಾಟ್ಯ ಕಲಿಕೆಯನ್ನು ನಡೆಸುತ್ತಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಕಳೆದ 16 ವರುಷಗಳಿಂದ ವಿದ್ವಾನ್ ಮಧೂರು ಪಿ. ಬಾಲಸುಬ್ರಮಣ್ಯಂ ಮತ್ತು ವಿದುಷಿ ಮಾಧವಿ ಎಸ್. ಭಟ್ ರವರಲ್ಲಿ ಸಂಗೀತ ಕಲಿಯುತ್ತಿದ್ದಾರೆ. 12 ವರುಷಗಳಿಂದ ವಿದ್ವಾನ್ ರವಿಕುಮಾರ್ ಮೈಸೂರು ಮತ್ತು ವಿದುಷಿ ವಸಂತಿ ರಾಮ್ ಭಟ್ ರವರಿಂದ ವಯೋಲಿನ್ ಅಭ್ಯಸಿಸುತ್ತಿದ್ದಾರೆ. ಇವರು ಸಂಗೀತ ಹಾಗೂ ವಯೋಲಿನ್ ನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಈಗ ತಮ್ಮ ವಿದ್ವತ್ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.
ಮೂರು ವರ್ಷಗಳಿಂದ ವಿದ್ವಾನ್ ರಾಘವೇಂದ್ರರಾವ್ ರವರಲ್ಲಿ ಕೊಳಲು ವಾದನವನ್ನು ಕಲಿಯುತ್ತಿದ್ದಾರೆ. ಹಲವಾರು ವೇದಿಕೆಯಲ್ಲಿ ನೃತ್ಯ, ಸಂಗೀತ, ವಯೋಲಿನ್ ಹಾಗೂ ಕೊಳಲು ಕಾರ್ಯಕ್ರಮವನ್ನು ನೀಡಿದ್ದು, ಆಕಾಶವಾಣಿಯಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಇವರು ತಮ್ಮ 15ನೆಯ ವಯಸ್ಸಿನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸುಧಾ ಮದ್ರಾಸ್ ನಡೆಸುವ ಹಿಂದಿ ಪರೀಕ್ಷೆಯಲ್ಲಿ ತಮ್ಮ ಪ್ರವೀಣ ಪರೀಕ್ಷೆಯನ್ನು ಪೂರೈಸಿ, ಅವರಿಂದ ಹಿಂದಿರತ್ನ ಎಂಬ ಬಿರುದನ್ನು ಪಡೆದಿದ್ದು ಮಹಾತ್ಮಾ ಗಾಂಧಿ ರಾಷ್ಟ್ರ ಭಾಷಾ ಹಿಂದಿ ಪ್ರಚಾರ ಸಂಸ್ಥೆ ಪುನಾ ಇವರಿಂದಲೂ ಪ್ರಮಾಣ ಪತ್ರವನ್ನು ಪಡೆದು ಉಡುಪಿಯ ಹಿಂದಿ ಪ್ರಚಾರ ಸಮಿತಿ ಇವರಿಂದ ಅಪರೂಪದ ವಿದ್ಯಾರ್ಥಿನಿ ಎಂಬ ಪುರಸ್ಕಾರವನ್ನು ಪಡೆದಿದ್ದಾರೆ.
ಇವರು ತಮ್ಮ ಬಿಡುವಿನ ಸಮಯದಲ್ಲಿ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಉಡುಪಿಯ ಕನಕದಾಸ ರಸ್ತೆಯಲ್ಲಿರುವ ಪುರಾತನ ಫ್ಯಾನ್ಸಿ ಸೆಂಟರ್ ಮಾಲಕ ಬಿ.ಮಾಧವ ಆಚಾರ್ಯ ಹಾಗೂ ಪೂರ್ಣಿಮಾ ಎಂ ಆಚಾರ್ಯ ದಂಪತಿಯ ಸುಪುತ್ರಿ.