ಉಡುಪಿ: ಸನಾತನ ಸಂಸ್ಕೃತಿ ಹಾಗೂ ವೇದ ಪುರಾಣಗಳ ಕಾಲದಿಂದಲೇ ‘ಭರತ ಖಂಡ’ ‘ಭರತವರ್ಷ’ ಎಂದು ಕರೆಯಲ್ಪಟ್ಟಿರುವ ‘ಪುಣ್ಯ ಭೂಮಿ’, ‘ದೇವ ಭೂಮಿ’ ಭಾರತ. ದೇಶದ ಸಂವಿಧಾನದ ಪರಿಚ್ಛೇದ 1ರಲ್ಲಿ ಉಲ್ಲೇಖಗೊಂಡಿರುವ ನಮ್ಮ ದೇಶದ ಮೂಲ ಹೆಸರು ಭಾರತ. ಆದರೆ ಕಾಂಗ್ರೆಸ್ಸಿಗೆ ಮಾತ್ರ ‘ಭಾರತ’ದ ಮೇಲೆ ದ್ವೇಷ; ‘ಇಂಡಿಯಾ’ದ ಮೇಲೆ ಅತೀವ ಮೋಹ ಯಾಕೆ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗ ಸಮ್ಮೇಳನದ ನಿಯೋಗಕ್ಕೆ ರಾಷ್ಟ್ರಪತಿ ಭವನದಿಂದ ಕಳುಹಿಸಲಾದ ಔತಣ ಕೂಟದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ ಪ್ರೆಸಿಡೆಂಟ್ ಆಫ್ ಭಾರತ್ ‘ ಎಂದು ನಮೂದಿಸಿರುವುದನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್ ಸಹಿತ ವಿಪಕ್ಷಗಳ ಐಎನ್ಡಿಐಎ ಒಕ್ಕೂಟಕ್ಕೆ ತಳಮಳ ಉಂಟಾಗಿರುವುದು ಜಗಜ್ಜಾಹೀರಾಗಿದೆ. ಅಷ್ಟಕ್ಕೂ ದೇಶಕ್ಕೆ ಹೊಸ ಹೆಸರನ್ನೇನೂ ಇಡುತ್ತಿಲ್ಲವಾದರೂ, ದೇಶ ಲೂಟಿಗೈಯಲು ಬಂದು, ಸ್ವಾತಂತ್ರ್ಯಹರಣ ಮಾಡಿರುವ ವಿದೇಶೀಯರು ಇಟ್ಟ ‘ಇಂಡಿಯಾ’ ಎಂಬ ಹೆಸರು ಗುಲಾಮಿ ಸಂಸ್ಕೃತಿಯನ್ನು ಮೇಳೈಸುವ ಪದವೆಂಬುದು ನಿರ್ವಿವಾದ. ಈ ದೇಶದ ಮೂಲ ಹೆಸರನ್ನು ಒಪ್ಪಲು ಹಿಂಜರಿಯುವ ಕಾಂಗ್ರೆಸ್ಸಿನ ನಡೆ ಅದರ ಸನಾತನ ವಿರೋಧಿ ಹಾಗೂ ದೇಶ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ಆಗಸ್ಟ್ 1949 ಆಗಸ್ಟ್ 28ರಂದು ದೇಶದ ಹೆಸರಿನ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಾಗ, ‘ಭಾರತ’ ಎಂಬ ಹೆಸರಿಗೆ ಒಕ್ಕೊರಲ ಸಹಮತ ವ್ಯಕ್ತವಾಗಿರುವುದು ಇತಿಹಾಸ. ‘ಭಾರತ’ ಎಂಬ ಹೆಸರಿನ ಸಾರ್ವತ್ರಿಕ ಬಳಕೆ ಸನಾತನ ಧರ್ಮದ ಪ್ರತೀಕವಾಗುತ್ತದೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಮತ್ತು ವಿಪಕ್ಷಗಳ ಐಎನ್ಡಿಐಎ ಒಕ್ಕೂಟಕ್ಕೆ ಕೇವಲ ಚುನಾವಣೆ ಮಾತ್ರ ಪ್ರಮುಖ ವಿಚಾರವಾಗಿದ್ದು, ದೇಶದ ಹಿತ, ಸ್ವಾಭಿಮಾನ ಮುಖ್ಯವಲ್ಲ ಎಂಬುದು ಜನಜನಿತವಾಗಿದೆ. ಇಂದು ಭಾರತೀಯರು ‘ಭಾರತ’ ಎಂಬ ಪವಿತ್ರ ಹೆಸರಿನಲ್ಲಿ ದೇಶ ಜಗದ್ಗುರುವಾಗುವುದನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ‘ಭಾರತ್ ಜೋಡೋ ಯಾತ್ರೆ’ಗೆ ಹೊರಟಿದ್ದ ಕಾಂಗ್ರೆಸ್, ಇದೀಗ ‘ಭಾರತ’ ಎಂಬ ಹೆಸರಿಗೇ ವಿರೋಧ ವ್ಯಕ್ತಪಡಿಸುತ್ತಾ, ಗುಲಾಮಿ ಸಂಕೇತದ ‘ಇಂಡಿಯಾ’ ಹೆಸರಿಗೆ ಜೋತು ಬಿದ್ದಿರುವುದು ಮಾತ್ರ ವಿಪರ್ಯಾಸ. ಜನತೆ ಪ್ರಬುದ್ಧರಾಗಿದ್ದು ಕಾಂಗ್ರೆಸ್ ಮತ್ತು ಐಎನ್ಡಿಐಎ ಒಕ್ಕೂಟದ ದೇಶ ವಿರೋಧಿ, ದೇಶದ ಸನಾತನ ಸಂಸ್ಕೃತಿ ವಿರೋಧಿ ಮನಸ್ಥಿತಿಯನ್ನು ಚೆನ್ನಾಗಿಯೇ ಅರಿತಿದ್ದು, ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.