ಮಂಗಳೂರು : ಹಿಂದುಗಳ ಹಲವು ಸಾಂಪ್ರದಾಯಿಕ ಮತ್ತು ಮಹತ್ವದ ಹಬ್ಬಗಳನ್ನು ಆಚರಿಸುವ ಸಂದರ್ಭ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿ ಹಬ್ಬದ ಆಚರಣೆಯನ್ನು ತಡೆಯುಟ್ಟುವ ಕ್ರಮ ಸರಿಯಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಪೊಲೀಸ್ ಕಮಿಷನರ್ ಅವರ ಆದೇಶದಂತೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಹಲವು ಕಠಿಣ ನಿಯಮಗಳನ್ನು ಹೇರಿ ಆದೇಶ ಹೊರಡಿಸಿದ್ದರು. ಇದು ಸಾಂಪ್ರದಾಯಿಕ ಹಬ್ಬದ ಆಚರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಕಾನೂನುಗಳನ್ನು ನೆಪವಾಗಿಟ್ಟುಕೊಂಡು ಹಬ್ಬದ ಆಚರಣೆಯ ಮೇಲೆ ನಿಯಂತ್ರಣ ಹೇರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಹಬ್ಬ ಆಚರಿಸುವ ಸಮಿತಿಯ ಪ್ರಮುಖರ ಫೋಟೋಗಳನ್ನು, ಆಚರಿಸುವ ಜಾಗದ ದಾಖಲೆಗಳನ್ನು ಠಾಣೆಗೆ ತಂದುಪ್ಪಿಸಬೇಕು ಎಂಬ ನಿರ್ದೇಶನ ಸಮಂಜಸವಾದುದಲ್ಲ. ಸಮಿತಿಯಲ್ಲಿರುವ ಸದಸ್ಯರೆಲ್ಲರೂ ಗೌರವಾನ್ವಿತ ವ್ಯಕ್ತಿಗಳಾಗಿದ್ದಾರೆ. ಅವರ ಫೋಟೋಗಳನ್ನು ಠಾಣೆಗೆ ತರಿಸುವ ವ್ಯವಸ್ಥೆ ಎಷ್ಟು ಸರಿ ? ಎಂದು ಅವರು ಪ್ರಶ್ಬಿಸಿದ್ದಾರೆ.
ಇನ್ನೂ ಹಬ್ಬದ ಆಚರಣೆಯ ಸಂದರ್ಭ ಮೆರವಣಿಗೆಗಳನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು ಎಂಬ ನಿಯಮ ಹೇಳಿರುವುದು ಮೆರವಣಿಗೆಯನ್ನು ಹತ್ತಿಕ್ಕುವ ಯತ್ನದ ಒಂದು ಭಾಗವಾಗಿದೆ.
ಮಂಗಳೂರು ವಿವಿಯಲ್ಲಿ ಕೂಡಾ ಗಣೇಶ ಹಬ್ಬ ಆಚರಣೆ ಮಾಡಬಾರದು ಎಂಬ ಸೂಚನೆಯೂ ಕಾಂಗ್ರೆಸ್ ಸರಕಾರದ ಹಿಡನ್ ಅಜೆಂಡಾವೇ ಆಗಿದೆ ಎಂದು ಅವರು ದೂರಿದ್ದಾರೆ.
ಸಾಂಪ್ರದಾಯಿಕವಾಗಿ ಈ ಹಿಂದಿನಂತೆ ನಡೆದು ಬಂದ ಹಬ್ಬವು ಯಥಾಸ್ಥಿತಿ ಆಚರಣೆಗೆ ಆಡಳಿತ ಅವಕಾಶ ಮಾಡಿಕೊಡಬೇಕು. ಬಿಜೆಪಿ ಸರ್ಕಾರ ಆಡಳಿತವಿದ್ದ ಸಂದರ್ಭ ಹಬ್ಬದ ಆಚರಣೆಗಳಿಗೆ ಯಾವುದೇ ಕಟ್ಟುನಿಟ್ಟಿನ ನಿಬಂಧನೆಗಳನ್ನು ವಿಧಿಸಲಾಗಿರಲಿಲ್ಲ.
ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಹಿಂದೂಗಳ ಸಾಂಪ್ರದಾಯಕ ಹಬ್ಬದ ಆಚರಣೆಗಳ ಮೇಲೆ ನಿಯಂತ್ರಣ ಹೇರಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಲಾಗುತ್ತಿದೆ.
ಯಾವುದೇ ಕಾರಣಕ್ಕೂ ಹಬ್ಬದ ಆಚರಣೆಗೆ ಅಡ್ಡಿಪಡಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಶಾಸಕ ಕಾಮತ್ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.