ಮಂಗಳೂರು: ಲವ್ ಜಿಹಾದ್ ವಿರುದ್ದ ರಕ್ತಪಾತದ ಎಚ್ಚರಿಕೆ ನೀಡಿದ ಹಿಂದೂ ಮುಖಂಡನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.
ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಈ ಪೋಸ್ಟರನ್ನು ತನ್ನ ಫೇಸ್ ಬುಕ್ ಮತ್ತು ಸಾಮಾಜಿಕ ತಾಣಗಳಲ್ಲಿ ಹಾಕಿದ್ದು ಭಾರಿ ವಿವಾದ ಸೃಷ್ಟಿಸಿದೆ. ‘ಪದೇ ಪದೇ ಹೇಳುತ್ತಿದ್ದೇವೆ, ಹಿಂದೂ ಹುಡುಗಿಯರ ಜೊತೆ ತಿರುಗಬೇಡಿ’ ‘ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ’ ‘ನಂತೂರು ಘಟನೆ ಕೇವಲ ಸ್ಯಾಂಪಲ್ ಅಷ್ಟೇ’ ‘ಲವ್ ಜಿಹಾದ್ ನಿಲ್ಲಿಸದೇ ಇದ್ದರೆ ನಿಮಗೆ ಮಯ್ಯತ್(ಮರಣ) ಶತಸಿದ್ದ’ ಹೀಗೆ ವೈರಲ್ ಆದ ಪೋಸ್ಟರ್ ನಲ್ಲಿ ಮರಣದ ಹೇಳಿಕೆ ದಾಖಲಿಸಿದ ಸಂದೇಶವಿದೆ. ಕಳೆದ ವಾರ ಮಂಗಳೂರು ನಗರದ ನಂತೂರು ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಬಳಿಕ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದೆ.
ಮೂಡಬಿದ್ರೆಯಿಂದ ಮಂಗಳೂರು ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ಹಿಂದೂ ಯುವತಿ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಭಜರಂಗದಳ ಕಾರ್ಯಕರ್ತರ ಬಂಧನವಾಗಿತ್ತು. ಇದೀಗ ನಂತೂರು ನೈತಿಕ ಪೊಲೀಸ್ ಗಿರಿ ಒಪ್ಪಿಕೊಂಡಿರುವ ಬಜರಂಗದಳ ಲವ್ ಜಿಹಾದ್ ವಿರುದ್ದ ನೇರಾ ಕಾರ್ಯಾಚರಣೆ ನಡೆಸುವ ಎಚ್ಚರಿಕೆ ನೀಡಿದ್ದು ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಪೋಸ್ಟ್ ಇದೀಗ ವೈರಲ್ ಆಗಿರುವ ಜೊತೆ ತೀವ್ರ ಸಂಚಲನ ಸೃಷ್ಟಿಸಿದೆ.