

ನವದೆಹಲಿ : ದೀಪಾವಳಿ ಸಂಭ್ರಮದಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವನ್ನು 62 ರೂಪಾಯಿ ಏರಿಕೆ ಮಾಡಿದೆ. ಸದ್ಯ ದೆಹಲಿಯಲ್ಲಿ ಸಿಲಿಂಡರ್ ದರ 1,802 ರೂಪಾಯಿ ಆಗಿದೆ.
5 ಕೆ.ಜಿ. ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 15 ರೂಪಾಯಿ ಹೆಚ್ಚಿಸಲಾಗಿದೆ. 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳನ್ನು ಮಾತ್ರವೇ ಹೆಚ್ಚಿಸಲಾಗಿದ್ದು, ಗೃಹ ಬಳಕೆ ಸಿಲಿಂಡರ್‌ಗಳ ದರ ಏರಿಕೆಯಾಗಿಲ್ಲ.
ಇಂದಿನಿಂದ ಜಾರಿ :
ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪರಿಷ್ಕೃತ ದರವು ಇಂದಿನಿಂದಲೇ ದೇಶದಲ್ಲಿ ಜಾರಿಯಾಗಲಿದೆ. ದೆಹಲಿ, ಮುಂಬೈ, ಕಲ್ಕತ್ತಾ, ಚೆನ್ನೈ ನಗರಗಳಲ್ಲಿ ಇಂದಿನಿಂದಲೇ ಈ ಪರಿಷ್ಕೃತ ದರ ಇರಲಿದೆ. ಕಳೆದ ಮೂರು ತಿಂಗಳಿನಿಂದಲೂ ವಾಣಿಜ್ಯ ಬಳಕೆ ಸಿಲಿಂಡರ್ ದರವು ಏರುತ್ತಲೇ ಇದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಮೊದಲ ದಿನದಂದೇ ದರ ಏರಿದ್ದವು.
ಇದೀಗ ನವೆಂಬರ್ ತಿಂಗಳ ಮೊದಲ ದಿನವೂ ದರ ಏರಿಕೆ ಕಂಡಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚಳ, ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುತ್ತವೆ. ಅದರಂತೆ ಈ ತಿಂಗಳು ಕೂಡ ಸಿಲಿಂಡರ್ ದರ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ದರ ಎಷ್ಟು?
ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರ 1,879 ರೂಪಾಯಿ ಇದೆ. 47 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್ ದರ 4,695 ರೂಪಾಯಿ ಎನ್ನಲಾಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಇಲ್ಲಿಯೂ ಯಾವುದೇ ಬದಲಾವಣೆ ಇಲ್ಲ. ರಾಜ್ಯದಲ್ಲಿ ಗೃಹಬಳಕೆಯ 14.2 ಕೆ.ಜಿ ತೂಕದ ಸಿಲಿಂಡರ್ ದರ 805 ರೂಪಾಯಿ ಇದ್ದರೆ, 5 ಕೆ.ಜಿ ತೂಕದ ಸಿಲಿಂಡರ್ ದರ 300 ರೂಪಾಯಿಯಷ್ಟಿದೆ.