ಯುವಕನೋರ್ವ ತನ್ನ ಪ್ರಿಯತಮೆ ಜೊತೆ ಮಾತನಾಡುತ್ತಿರುವಾಗ ಆಕೆಯ ಮಾಜಿ ಪ್ರಿಯಕರ ಸ್ನೇಹಿತರೊಂದಿಗೆ ಬಂದು ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಯುವಕನೋರ್ವ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾನೆ.
ಮಂಗಳೂರು ಕೋಡಿಕಲ್ ನಿವಾಸಿ ಸಾಗರ್ (23) ನೀಡಿದ ದೂರಿನ ಮೇರೆಗೆ ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್, ಹೇಮಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.29 ರಂದು ಮಧ್ಯಾಹ್ನ ಸಾಗರ್ ಕಂಬಳಗದ್ದೆಯಲ್ಲಿರುವ ವೇಳೆ ಆತನ ಪ್ರೇಯಸಿ ಕೂಡ ಇದ್ದು, ಅವಳಲ್ಲಿ ಮಾತನಾಡುತ್ತಿರುವಾಗ ಕೌಶಿಕ್ ಎಂಬಾತ ಬಂದು ‘ನೀನು ಯಾರು..!!??, ಎಲ್ಲಿಯವ..!!??, ನಿನಗೂ ಆಕೆಗೂ ಏನು ಸಂಬಂಧ..!??, ಎಂದು ಕೇಳಿದ್ದು, ಆಗ ಸಾಗರ್ ನಾನು ಆಕೆಯ ಲವರ್ ಎಂದು ತಿಳಿಸಿದ್ದು, ಆಗ ಸಾಗರ್ ಮತ್ತು ಜೊತೆಗಿದ್ದ ದುರ್ಗಾಪ್ರಸಾದ್ ರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ತಾನು ಆಕೆಯ ಲವರ್ ನೀನು ಯಾಕೇ, ಆಕೆಯನ್ನು ಲವ್ ಮಾಡುತ್ತೀಯ ಎಂದು ಹೇಳಿ ಅವರನ್ನು ಬೇರೆ ಕಡೆ ಬರುವಂತೆ ಹೇಳಿದ್ದಾರೆ, ಸಾಗರ ಅಲ್ಲಿಗೆ ತೆರಳಿದಾಗ ಕೌಶಿಕ್ ಮತ್ತು ಆತನ ಸ್ನೇಹಿತರು ಇದ್ದು, ಇಲ್ಲಿ ಮಾತನಾಡಲು ಆಗುವುದಿಲ್ಲ ಜನ ಇಲ್ಲದ ಸ್ಥಳಕ್ಕೆ ಹೋಗುವ ಎಂದು ಹೇಳಿ ಆಲ್ಟೊ ಕಾರು ಮತ್ತು ಮೋಟಾರ್ ಸೈಕಲ್ ನಲ್ಲಿ ಬಲ್ನಾಡು ಎಂಬಲ್ಲಿಯ ನಿರ್ಜನ ಪ್ರದೇಶಕ್ಕೆ ತೆರಳಿದ್ದು, ಆಗ ಅವರು ಸಾಗರ್ ಮತ್ತು ದುರ್ಗಾಪ್ರಸಾದ್ ಗೆ ಹಲ್ಲೆ ನಡೆಸಿ ಆಕೆಯನ್ನು ಲವ್ ಮಾಡಬಾರದು ಎಂದು ಹೇಳಿದ್ದು, ಇನ್ನು ಮುಂದೆ ಆಕೆಯ ಸುದ್ದಿಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಕೌಶಿಕ್ ಎಂಬಾತ ಸಾಗರ್ ಪ್ರೇಯಸಿಯ ಮಾಜಿ ಪ್ರೇಮಿಯಾಗಿದ್ದು, ಈ ಹಿನ್ನೆಲೆ ಆತ ಸ್ನೇಹಿತರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾನೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ: 05/2023 ಕಲಂ: 143,147,323,324,506 ಜೊತೆಗೆ 149 ಐಪಿಸಿ ಪ್ರಕರಣ ದಾಖಲಾಗಿದೆ.