ಮಂಗಳೂರು: ಕಾರಿನಲ್ಲಿ ಸಹ ಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ವಿಚಿತ್ರ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ.
500 ರೂ. ದಂಡ ಪಾವತಿಸುವಂತೆ ಕಾರು ಚಾಲಕನಿಗೆ ನೋಟಿಸ್ ಬಂದಿದ್ದು, ಈ ನೋಟಿಸ್ ನೋಡಿ ಅವರು ಶಾಕ್ ಆಗಿದ್ದಾರೆ. ನವೆಂಬರ್ 29ರಂದು ಮಂಗಳಾದೇವಿ ರಸ್ತೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದ್ದು, ಸಹ ಪ್ರಯಾಣಿಕ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ದಂಡ ಪಾವತಿಸಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಉಲ್ಲಂಘನೆ ವಿವರಗಳು ಎಂಬ ಕಾಲಂನಲ್ಲಿ ’ಕಾರು’ ಎಂದೂ, ಉಲ್ಲಂಘನೆ ರೀತಿ ಕಾಲಂನಲ್ಲಿ ಸಹಸವಾರ ಹೆಲ್ಮೆಟ್ ಧರಿಸಿಲ್ಲ’ ಎಂದು ನಮೂದಿಸಲಾಗಿದೆ. ಡಿಸೆಂಬರ್ 22ರಂದು ಈ ನೋಟಿಸ್ ಚಾಲಕನ ಕೈ ಸೇರಿದೆ.ನೋಟಿಸ್‌ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾದ ಚಿತ್ರವಿದ್ದು, ಅದರಲ್ಲಿ ದ್ವಿಚಕ್ರ ವಾಹನವೊಂದರ ಸಹ ಸವಾರ ಹೆಲ್ಮೆಟ್ ಇಲ್ಲದೇ ಸಂಚಾರ ಮಾಡುತ್ತಿರುವುದು ಕಾಣಿಸಿದೆ. ಇನ್ನು ಈ ದ್ವಿಚಕ್ರ ವಾಹನದ ಸ್ವಲ್ಪ ದೂರದಲ್ಲಿ ಕಾರು ಕೂಡಾ ಸಂಚರಿಸುತ್ತಿದೆ. ಹೀಗಾಗಿ ಅಟೋಮೇಶನ್ ಸೆಂಟರ್‌ನಿಂದ ಪೊಲೀಸರು ನೋಟಿಸ್ ಕಳುಹಿಸುವ ವೇಳೆ ದ್ವಿಚಕ್ರ ವಾಹನದ ಸವಾರನಿಗೆ ಕಳುಹಿಸುವ ಬದಲು ಕಾರು ಚಾಲಕನ ವಿಳಾಸಕ್ಕೆ ಕಳುಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.