ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 8 ರಿಂದ 12 ರವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸೇರಿ ಹಲವು ಕಡೆಗಳಿಂದ ಭಕ್ತರು ಹಾಗೂ ಪ್ರವಾಸಿಗರು ಬರುವ ಕಾರಣಕ್ಕಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ರಾಜ್ಯದ ಹಲವು ಕಡೆಗಳಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಮುಖವಾಗಿ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚುವರಿ ಬಸ್‌ಗಳನ್ನು ಈ ವೇಳೆ ಬಿಡಲಾಗುತ್ತಿದ್ದು, ಇದಕ್ಕೆ ಅಗತ್ಯ ಸಿದ್ಧತೆಯನ್ನು ಕೆಎಸ್‌ಆರ್‌ಟಿಸಿ ಮಾಡಿಕೊಂಡಿದೆ.
ಡಿ.8ರಂದು ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ನಡೆಯಲಿದೆ.ಡಿ.10ರಂದು ರಾತ್ರಿ 7ರಿಂದ 10ರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿ.11 ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ.ಗುರುರಾಜ ಕರ್ಜಗಿ ಉದ್ಘಾಟಿಸಲಿದ್ದಾರೆ ಡಿ.12ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಗಮಕಿ ಡಾ. ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು. ಡಿ.8ರಂದು ಹೊಸಕಟ್ಟೆ ಉತ್ಸವ ನಡೆದರೆ, 9ರಂದು ಕೆರೆಕಟ್ಟೆ ಉತ್ಸವ ನಡೆಯಲಿದೆ. ಡಿ. 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರುಕಟ್ಟೆ ಉತ್ಸವ, 12ರಂದು ಗೌರಿಮಾರುಕಟ್ಟೆ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಕೊನೆಯಲ್ಲಿ ಅಂದರೆ ರಾತ್ರಿ 12 ಗಂಟೆ ನಂತರ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 13ರಂದು ಸಂಜೆ 7ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಮವಸರಣ ಪೂಜೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.