
ಮಂಗಳೂರು: ದಾರಿ ಕೇಳುವ ನೆಪದಲ್ಲಿ ಬೈಕ್ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕತ್ತಿನಲ್ಲಿದ್ದ ಸುಮಾರು ಎರಡೂವರೆ ಪವನ್ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆ ಪೋಲಿಸ್ ಠಾಣಾ ವ್ಯಾಪ್ತಿಯ ಪೈವಳಿಕೆ-ಚೇವಾರ್ ರಸ್ತೆಯ ಕಟ್ಟದಪಮನೆ ಎಂಬಲ್ಲಿ ನಡೆದಿದೆ. ಕಟ್ಟದಮನೆ ಗೋಪಾಲ ಕೃಷ್ಣ ಭಟ್ ಚಿನ್ನದ ಸರ ಕಳೆದುಕೊಂಡವರು. ಇವರು ಬೆಳಗ್ಗೆ ಮನೆ ಸಮೀಪದ ತೋಟಕ್ಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಹೆಲ್ಮೆಟ್ ಧಾರಿಯಾಗಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದು ಚಿನ್ನದ ಸರ ಎಳೆದು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಇಬ್ಬರು ಚೇವಾರ್ ರಸ್ತೆಯಾಗಿ ಪರಾರಿಯಾಗಿದ್ದು, ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಕುಂಬಳೆ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ.
