ಮಂಗಳೂರು: ಮಂಗಳೂರು – ಮಡಗಾಂವ್ ನಡುವೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಆರು ರೈಲುಗಳಿಗೆ ಡಿ. 30ರಂದು ಬೆಳಗ್ಗೆ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಮಂಗಳೂರು ಸೆಂಟ್ರಲ್‌ರಲ್ಲಿ ಕೂಡ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭಾ ಸದಸ್ಯ ಡಾ ಡಿ ವೀರೇಂದ್ರ ಹೆಗ್ಗಡೆ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಪ್ರತಾಪ್‌ಸಿಂಹ ನಾಯಕ್, ಬಿ.ಎಂ. ಫಾರೂಕ್, ಎಸ್.ಎಸ್. ಭೋಜೇಗೌಡ, ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸುವರು. ಉದ್ಘಾಟನಾ ರೈಲು ಬೆಳಗ್ಗೆ 11ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಡಲಿದ್ದು, ಸುರತ್ಕಲ್, ಮೂಲ್ಕಿ ಮತ್ತಿತರ ನಿಲ್ದಾಣಗಳಲ್ಲಿ ಸ್ವಾಗತ ಸ್ವೀಕರಿಸಿಕೊಂಡು ಸಂಜೆ ವೇಳೆಗೆ ಮಡಗಾಂವ್ ತಲುಪಲಿದೆ. ಈ ರೈಲಿ ನಲ್ಲಿ ಸಂಸದ ನಳಿನ್ ಕುಮಾರ್ ಸೇರಿದಂತೆ ಗಣ್ಯರು ಪ್ರಯಾಣಿಸಲಿದ್ದಾರೆ. ಇದೇ ವೇಳೆ ಮಂಗಳೂರು ಸೆಂಟ್ರಲ್ ನಿಲ್ದಾಣದ 4 ಮತ್ತು 5ನೇ ಪ್ಲಾಟ್‌ಫಾರಂ ಕೂಡ ಲೋಕಾರ್ಪಣೆಗೊಳ್ಳುವ ಸಂಭವ ಇದೆ.