ಮಂಗಳೂರು: ನಗರದ ತಲಪಾಡಿಯ ಕೆ.ಸಿ. ರೋಡ್‌ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಶುಕ್ರವಾರ ನಡೆದ ದರೋಡೆ ಪ್ರಕರಣದಲ್ಲಿ ಆರು ಮಂದಿಯಿದ್ದ ತಂಡದಲ್ಲಿ ಜೊತೆಯಾಗಿ ಬಂದವರು ದರೋಡೆ ಬಳಿಕ ಇಬ್ಭಾಗವಾಗಿ ಎರಡು ತಂಡಗಳಾಗಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹಳೆಯ ಫಿಯೇಟ್ ಕಾರಿನಲ್ಲಿ ದರೋಡೆಗೆ ಬಂದವರು ಮಾರ್ಗಮಧ್ಯೆ ಶವರ್ಲೇಟ್ ಕಾರಿನಲ್ಲಿ ಗೋಣಿ ತುಂಬಾ ಇದ್ದ ಕದ್ದ ಚಿನ್ನ ಸಾಗಿಸಿದ್ದಾರೆ ಎನ್ನಲಾಗಿದೆ. ಇವರು ಮಂಗಳೂರಿನಲ್ಲಿ ಮೊಬೈಲ್ ಎಸೆದು ಬಂಟ್ವಾಳ ಕಡೆಗೆ ತೆರಳಿರುವ ಶಂಕೆಯಿದೆ. ಆದರೆ ಬಿ.ಸಿ.ರೋಡ್‌ನಲ್ಲಿ ಟೋಲ್ ಹಾಗೂ ಸಿಸಿಟಿವಿ ತಪ್ಪಿಸಲು ಟೋಲ್‌ನ ಪಕ್ಕದ ರಸ್ತೆ ಬಳಸಿ ಎಸ್ಕೇಪ್ ಆಗಿರುವ ಶಂಕೆಯಿದೆ. ಬಳಿಕ ವಿಟ್ಲ ಮೂಲಕ ಕೇರಳ ಗಡಿ ತಲುಪಿ ಕೇರಳದ ಗ್ರಾಮೀಣ ಪ್ರದೇಶ ತಲುಪಿರುವ ಸಾಧ್ಯತೆಯಿದೆ. ಎರಡು ದಿಕ್ಕಿನಲ್ಲಿ ಸಾಗಿದ ಕಾರುಗಳು ಕೆಲವೇ ಗಂಟೆಗಳಲ್ಲಿ ಕೇರಳದಲ್ಲಿ ಸಂಧಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿಯಿದೆ. ಈ ನಿಟ್ಟಿನಲ್ಲಿ ಮೂರು ಖಾಕಿ ಟೀಮ್ ಕೇರಳದಲ್ಲಿ ಬೀಡುಬಿಟ್ಟಿದೆ.