ಮಂಗಳೂರು :ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತರಾದ ಬಲಿಪ ನಾರಾಯಣ ಭಾಗವತ ಅವರು ಇಂದು ಗುರುವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
1938 ರಲ್ಲಿ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ ಬಲಿಪ ಮಾಧವ ಭಟ್ಟ ಮತ್ತು ಸರಸ್ವತಿ ದಂಪತಿಗೆ ಜನಿಸಿದ ಬಲಿಪ ನಾರಾಯಣ ಭಾಗವತರಿಗೆ ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟರೇ ಗುರುಗಳಾಗಿದ್ದು 6 ದಶಕಗಳ ಅನುಭವ ಹೊಂದಿದ್ದಾರೆ. ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು. ಬಲಿಪ ಭಾಗವತರ ನಿಧನಕ್ಕೆ ಗಣ್ಯರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ. ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಪದ್ಯಗಳಿಗೆ ತನ್ನ ಪರಿಪೂರ್ಣ ಯಕ್ಷಗಾನೀಯ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಪರಿಪೂರ್ಣ ನ್ಯಾಯ ಒದಗಿಸಿಕೊಟ್ಟವರು ಬಲಿಪ ಭಾಗವತರು. ಆಗಿನ ಪ್ರಸಿದ್ದ ಮೇಳಗಳಾದ ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ. 35ಕ್ಕೂ ಮಿಕ್ಕಿ ಪ್ರಸಂಗಳನ್ನು ರಚನೆ ಮಾಡಿದ ಭಾಗವತರು ಯಕ್ಷಗಾನದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು. ಇವರ ಕಲಾ ಸೇವೆ ಗುರುತ್ತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ 2010, ಆಳ್ವಾಸ್ ನುಡಿಸಿರಿ 2010, ಕರ್ನಾಟಕ ಸಂಘ ದುಬೈ 1988, ಶ್ರೀ ಎಡನೀರು ಮಠ 1994, ಕರಾವಳಿ ಯಕ್ಷಗಾನ ಸಮ್ಮೇಳನ 2000, ಕರ್ನಾಟಕ ಜನಪದ ಪರಿಷತ್ತು ಬೆಂಗಳೂರು 2002, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು 2004, ಕೇರಳ ಸಂಗೀತ ನಾಟಕ ಅಕಾಡೆಮಿ ತಿರುವನಂತಪುರ 2007, ಕರ್ನಾಟಕ ಜಾನಪದ ಕಲಾ ಅಧ್ಯಯನ ಕೇಂದ್ರ ಉಡುಪಿ 2008, ಕಲ್ಕೂರ ಪ್ರತಿಷ್ಠಾನ 2015 ಹೀಗೇ 200 ಕ್ಕೂ ಅಧಿಕ ಪ್ರಶಸ್ತಿ- ಪುರಸ್ಕಾರಗಳು ಅರಸಿಕೊಂಡು ಬಂದಿವೆ.