ಕಡಬ: ಮೊಸಳೆ ಉದರದಲ್ಲಿತ್ತು 1 ಕೆ.ಜಿ. ಪ್ಲಾಸ್ಟಿಕ್‌..! ತ್ಯಾಜ್ಯ ಜೀರ್ಣವಾಗದೆ ಮೊಸಳೆ ಸಾವು

ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.

ಪ್ಲಾಸ್ಟಿಕ್‌ನಲ್ಲಿದ್ದ ತ್ಯಾಜ್ಯ ಅಜೀರ್ಣ ವಾದದ್ದು ಮೊಸಳೆಯ ಸಾವಿಗೆ ಕಾರಣವಾಯಿತೇ ಅಥವಾ ಪ್ಲಾಸ್ಟಿಕ್‌ ಕಾರಣವಾಯಿತೇ ಎಂಬುದು ಇನ್ನಷ್ಟು ತನಿಖೆಯಿಂದ ಹೊರಬರಬೇಕಿದೆ. ಇದು ಆತಂಕಕಾರಿ ಯಾಗಿದ್ದು, ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯ ಸೇವನೆಯಿಂದ ಮೊಸಳೆ ಸತ್ತ ಪ್ರಕರಣ ಇದು ಮೊದಲನೆಯದಾಗಿದೆ.

ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರಾ ಹೊಳೆಯ ಕೊಡಿಂಬಾಳ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮೊಸಳೆಯ ಮೃತದೇಹ ಪತ್ತೆಯಾಗಿತ್ತು.

ಮರಣೋತ್ತರ ಪರೀಕ್ಷೆ ವೇಳೆ ತ್ಯಾಜ್ಯ ಪತ್ತೆ
ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ಕಡಬದ ಪಶುವೈದ್ಯಾಧಿಕಾರಿ ಡಾ| ಅಜಿತ್‌ ನಡೆಸಿದರು. ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಕವರ್‌ನಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್‌ ಮತ್ತಿತರ ತ್ಯಾಜ್ಯ ಕೆ.ಜಿ.ಗೂ ಅಧಿಕ ಪ್ರಮಾಣದಲ್ಲಿ ಪತ್ತೆಯಾಗಿದೆ. ಅದು ಜೀರ್ಣಗೊಳ್ಳದೆ ಅಸೌಖ್ಯದಿಂದ ಮೊಸಳೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಸುಮಾರು ಅಂದಾಜು 3-4 ವರ್ಷದ ಹೆಣ್ಣು ಮೊಸಳೆ ಇದಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಅಂತಿಮ ಪ್ರಕ್ರಿಯೆ ನಡೆಸಲಾಯಿತು. ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್‌ ಪ್ರವೀಣ್‌ ಕುಮಾರ್‌ ಶೆಟ್ಟಿ, ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್‌, ಉಪ ವಲಯಾರಣ್ಯಾಧಿಕಾರಿಗಳಾದ ಸುಬ್ರಹ್ಮಣ್ಯ, ಅಜಿತ್‌ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ ಮಹಜರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಜಲಮೂಲಕ್ಕೆ ತ್ಯಾಜ್ಯ; ಜಲಚರ ಸಂಕಟ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ನದಿ ಪ್ರದೇಶ, ಸೇತುವೆ ಸುತ್ತಮುತ್ತ ತ್ಯಾಜ್ಯ ಸುರಿಯುವ ಪರಿಪಾಠ ತೀವ್ರವಾಗಿದೆ. ಸ್ಥಳೀಯ ಆಡಳಿತಗಳೂ ಇದನ್ನು ತಡೆಯುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಈ ತ್ಯಾಜ್ಯ ಮೀನು ಮತ್ತಿತರ ಜಲಚರಗಳ ಜೀವಕ್ಕೆ ಕುತ್ತು ತರುತ್ತಿದೆ.ಸಮುದ್ರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಸಮಸ್ಯೆ ತಾರಕಕ್ಕೇರಿದ್ದು, ಈಗ ನದಿಗಳಲ್ಲೂ ಜಲಚರ ಜೀವಕ್ಕೆ ಸಂಚಕಾರ ತರುತ್ತಿದೆ.

ದೇಶದಲ್ಲಿ ಇರುವ 3 ಪ್ರಭೇದಗಳ ಮೊಸಳೆಗಳ ಪೈಕಿ ಎರಡು 1972ರ ವನ್ಯಜೀವಿ (ರಕ್ಷಣೆ) ಕಾಯಿದೆ ಅನ್ವಯ ಅಳಿವಿನಂಚಿನಲ್ಲಿರುವ ಜೀವಿಗಳ ವರ್ಗಕ್ಕೆ ಸೇರುತ್ತವೆ. ಉಭಯ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್‌, ತ್ಯಾಜ್ಯ ಸೇವನೆಯಿಂದ ಮೊಸಳೆ ಸತ್ತಿರುವ ಪ್ರಕರಣ ಮೊದಲಿನದು. ಇದು ಗಂಭೀರವಾಗಿದ್ದು, ನದಿ ಮಾಲಿನ್ಯದ ತಡೆಯುವುದರ ಜತೆಗೆ ಜಲಚರಗಳ ಜೀವ ಉಳಿಸುವಲ್ಲಿ ಜಿಲ್ಲಾಡಳಿತ ಇನ್ನಾದರೂ ನದಿ, ಸಮುದ್ರ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಕಠಿನ ಕ್ರಮ ಕೈಗೊಳ್ಳಬೇಕಿದೆ.

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.