ಮಂಗಳೂರು : ಬಲವಂತವಾಗಿ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ತೃತೀಯಲಿಂಗಿಯಾಗಿ ಪರಿವರ್ತನೆಗೊಂಡಿರುವ ಮಹಮ್ಮದ್ ನಿಜಾಮ್ ನಮ್ಮನ್ನು ಸ್ವಂತ ಇಚ್ಛೆಯ ಪ್ರಕಾರ ಬದುಕಲು ಬಿಡಿ. ಅವಮಾನಿಸುವುದನ್ನು ಬಿಟ್ಟು ನಮ್ಮ ಬದುಕುವ ಹಕ್ಕುಗಳನ್ನು ಗೌರವಿಸಿ ಎಂದಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೊಕ್ಕೊಟ್ಟಿನಲ್ಲಿ ನಡೆದ ತೃತೀಯಲಿಂಗಿಗಳ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ನೋವು ತೋಡಿಕೊಂಡರು. ತೃತೀಯಲಿಂಗಿ ಬಂಟ್ವಾಳದ ಸಾನಿಯಾ (ಮೊದಲ ಹೆಸರು ಮಹಮ್ಮದ್ ನಿಜಾಮ್), ‘ನನಗೆ ಬಾಲ್ಯದಿಂದಲೂ ಹುಡುಗಿಯರಂತೆ ಬದುಕುವಾಸೆಯಿತ್ತು.
ಆಕಾರಣದಿಂದಾಗಿಯೇ ನಾನು ತೃತೀಯಲಿಂಗಿಯಾಗಿ ಪರಿವರ್ತನೆಗೊಂಡಿದ್ದೇನೆ. ಆದರೆ, ತೃತೀಯಲಿಂಗಿಗಳು ಸೇರಿ ನನಗೆ ಬಲವಂತದಿಂದ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ನಾನು ಹುಡುಗಿಯಂತೆ ಬದುಕಲು ಬಯಸಿದ್ದು ತಪ್ಪೇ’ ಎಂದು ಪ್ರಶ್ನಿಸಿದರು. ‘ಮನೆಯವರು ನನ್ನ ನಿರ್ಧಾರವನ್ನು ಒಪ್ಪಿದ್ದಾರೆ. ಆದರೂ ಕೆಲವರು ಅವರನ್ನು ಹಿಯಾಳಿಸುತ್ತಿದ್ದಾರೆ. ನನಗೆ ಮನೆಗೆ ಹೋಗಿ ಬರಬೇಕೆಂಬ ಇಚ್ಛೆ ಇದೆ. ಆದರೆ, ಸಮಾಜಕ್ಕೆ ಅಂಜಿ ಮನೆಯಿಂದ ದೂರ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.