ಮಂಗಳೂರು : ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿದ ಮಂಗಳೂರು ಪೊಲೀಸರು ಇಂದು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರದ ನಿವಾಸಿ ಹಾಗೂ ಪ್ರಸ್ತುತ ಮಂಗಳೂರಿನ ಅತ್ತಾವರದ ಅಪಾರ್ಟ್ ಮೆಂಟ್‌ನಲ್ಲಿ ವಾಸವಿರುವ ಡಾ ರಾಘವ ದತ್ತಾ (28) ಮತ್ತು ಬೆಂಗಳೂರಿನ ಹಲಸೂರು ಜೋಡುಪಾಳ್ಯದ ನಿವಾಸಿ ಹಾಗೂ ಹಾಲಿ ಮಂಗಳೂರಿನ ಫಳ್ನೀರ್ ನಲ್ಲಿ ವಾಸವಿರುವ ಡಾ ಬಾಲಾಜಿ(29) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೆ ಇಬ್ಬರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 15ಕ್ಕೇರಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಕರಣದ ತನಿಖೆ ಮುಂದವರಿಸಲಾಗಿದ್ದು, ಮತ್ತಷ್ಟು ಜನರ ಬಂಧನದ ಸಾಧ್ಯತೆ ಇದೆ ಎಂದರು. ಕಳೆದ 10 ದಿನಗಳಲ್ಲಿ ಡ್ರಗ್ಸ್ ಮಾರಾಟ ಜಾಲದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 100 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಿವಿಧ ಪ್ರಕರಣಗಳಲ್ಲಿ 20ಕ್ಕೂ ಅಧಿಕ ಮಂದಿಯ ಬಂಧನವಾಗಿದೆ ಎಂದಿದ್ದಾರೆ.