October 23, 2024
WhatsApp Image 2024-07-09 at 12.04.10 PM

ಮಂಗಳೂರು, ಉಡುಪಿ, ಬೆಳಗಾವಿ, ಉತ್ತರಕನ್ನಡ, ಕರಾವಳಿ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ನದಿ, ಜಲಾಶಯಗಳು, ಹಳ್ಳಕೊಳ್ಳ ಭರ್ತಿಯಾಗಿ ಹೊಲಗದ್ದೆಗಳು ಜಲಾವೃತಗೊಂಡಿವೆ. ರಸ್ತೆಗಳು ನೀರು ತುಂಬಿ ಸಂಚಾರಕ್ಕೆ ಅಡಚಣೆಯಾಗಿದೆ.

ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ, ಉಡುಪಿ ಸೇರಿದಂತೆ ಜಿಲ್ಲೆಗಳ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತಗ್ಗುಪ್ರದೇಶಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ನೂರಾರು ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ಜನರನ್ನು ಎಸ್‌‍ಡಿಆರ್‌ಎಫ್‌ ತಂಡದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಹಲವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ವರುಣನ ಆರ್ಭಟ ಮುಂದುವರೆದಿದೆ.

ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ಜನರು ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಶಾಲಾ-ಕಾಲೇಜುಗಳಿಗೆ ನೀಡಿರುವ ರಜೆಯನ್ನು ಮುಂದುವರೆಸಲಾಗಿದೆ.ಉಡುಪಿ ಜಿಲ್ಲೆಯಾದ್ಯಂತ ಕೂಡ ಮಳೆ ಮುಂದುವರೆದಿದೆ. ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಜಾಗ ಮುಳುಗಡೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಇಲ್ಲೇ ಬೀಡುಬಿಟ್ಟು ನೀರು ಹೊರಹಾಕಲು ಹರಸಾಹಸ ಪಟ್ಟರು.

ವಿವಿಧೆಡೆ ಕೃತಕ ನೆರೆ ಸೃಷ್ಟಿಯಾಗಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಮನೆಯಿಂದ ಹೊರಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಜಿಲ್ಲೆಯ ಎಲ್ಲಾ ಅಂಗನವಾಡಿ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಪ್ರೌಢಶಾಲೆ, ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಆದೇಶಿಸಿದ್ದಾರೆ.

ಭಾರಿ ಮಳೆ ಬೀಳುವ ನಿರೀಕ್ಷೆಯಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡಿದೆ.ತಗ್ಗಿನ ಪ್ರದೇಶ, ಕೆರೆ, ನದಿ, ಸಮುದ್ರ ತೀರದ ನಿವಾಸಿಗಳು ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ.

ಪ್ರವಾಸಿಗರು ಪ್ರವಾಸಿ ಸ್ಥಳಗಳಿಗೆ ತೆರಳದಂತೆ ಜಾಗೃತಿ ವಹಿಸುವುದು, ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲೂ ವರುಷಧಾರೆ ಮುಂದುವರೆದಿದೆ. ಜಿಲ್ಲೆಯ ಕುಮಟಾ, ಹೊನ್ನಾವರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಕರಾವಳಿಯಲ್ಲೂ ಕೂಡ ಮಳೆಯ ಅಬ್ಬರ ಮುಂದುವರೆದಿದ್ದು, ತಗ್ಗುಪ್ರದೇಶದ ನಿವಾಸಿಗಳಿಗೆ ಆತಂಕ ಮೂಡಿಸಿದೆ.

ಉತ್ತರ ಕರ್ನಾಟಕದ ಗಡಿಭಾಗ ತತ್ತರ :
ಅತ್ತ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ಉ.ಕರ್ನಾಟಕದ ಗಡಿಭಾಗದ ಬೆಳಗಾವಿ, ಚಿಕ್ಕೋಡಿಯ ಹಲವು ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೃಷ್ಣಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.

ಚಿಕ್ಕೋಡಿ ಭಾಗದ ಹಲವು ಸೇತುವೆಗಳು ಜಲಾವೃತಗೊಂಡಿದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ದೂಧ್‌ಗಂಗಾ, ವೇದ್‌ಗಂಗಾ ನದಿ ನೀರಿನ ಮಟ್ಟ ಏರಿಕೆಯಾಗಿ, ಚಿಕ್ಕೋಡಿಯ ಯಕ್ಸಂಬಾದ ಮಲ್ಲಾಣಿಕಿ ಬಾಬಾ ದರ್ಗಾಕ್ಕೆ ನೀರು ಹರಿದಿದೆ.
ಮಲೆನಾಡು, ಕರಾವಳಿ, ಉ.ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಐದು ದಿನ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಪ್ರಕೃತಿ ವಿಕೋಪ ಪಡೆ ಸನ್ನದ್ಧವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ವರುಣನ ಆರ್ಭಟ ಜೋರಾಗಿತ್ತು. ನಿನ್ನೆ ಸಂಜೆಯಿಂದ ನಗರದ ವಿವಿಧೆಡೆ ಭಾರಿ ಮಳೆ ಸುರಿದ ಪರಿಣಾಮ ಜನ ಹೈರಾಣಾಗಿದ್ದರು. ವಾಹನ ಸವಾರರು ಮನೆಗೆ ತೆರಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಮೈಸೂರು ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಕಾವೇರಿ ಜಂಕ್ಷನ್‌, ಓಕಳಿಪುರ ಜಂಕ್ಷನ್‌, ಶಿವಾನಂದ ವೃತ್ತ ರೈಲ್ವೆ ಕೆಳಸೇತುವೆ ಸೇರಿದಂತೆ ವಿವಿಧೆಡೆ ನೀರು ನಿಂತು ವಾಹನ ಸವಾರರು ಪರದಾಡಿದರು.ಭಾರಿ ಮಳೆ ಪರಿಣಾಮ ಹಲವೆಡೆ ಮರಗಳು ಧರೆಗುರುಳಿ, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಇಂದೂ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ.

About The Author

Leave a Reply

Your email address will not be published. Required fields are marked *

You cannot copy content of this page.