ಕಾರ್ಕಳ: ಕಾರ್ಕಳ ತಾಲೂಕಿನ ಈದು ಗ್ರಾಮದ 36 ವರ್ಷ ಪ್ರಾಯದ ಪುರುಷರೊಬ್ಬರಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಅವರು ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದು, ಗುಣಮುಖರಾಗುತ್ರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ತಿಳಿಸಿದ್ದಾರೆ. ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ 36 ವರ್ಷ ಪ್ರಾಯದ ಇವರಲ್ಲಿ ರವಿವಾರ ಜ್ವರ ಕಾಣಿಸಿಕೊಂಡಿದ್ದು, ಸೋಮವಾರ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರ ರಕ್ತ ಪರೀಕ್ಷೆ ನಡೆಸಿದ್ದು, ಬುಧವಾರ ಕಾಲರಾವೆಂಬುದು ದೃಢಪಟ್ಟಿತ್ತು. ಇದೀಗ ಅವರಿಗೆ ಅಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿ ಲಾರಿ ಚಾಲಕರಾಗಿರುವುದರಿಂದ ಹೊರಗೆಲ್ಲಾ ತಿನ್ನುವ ಅಭ್ಯಾಸವಿದ್ದು ಎಲ್ಲಿಂದ ಈ ರೋಗ ಬಂದಿರಬಹುದು ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಯಾರಲ್ಲೂ ಈ ರೋಗದ ಲಕ್ಷಣ ಕಂಡುಬಂದಿಲ್ಲ. ಸದ್ಯ ಒಬ್ಬರಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.