

ಸುಬ್ರಹ್ಮಣ್ಯ: ಮಾಂಸ ಮಾಡುವವರಿಗೆ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದದನ್ನು ಪತ್ತೆ ಹಚ್ಚಿದ ಸುಬ್ರಹ್ಮಣ್ಯ ಪೊಲೀಸರು ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆದ ಘಟನೆ ಮಾ.5ರಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಹರ ಪಳ್ಳತ್ತಡ್ಕದಿಂದ ಬಿಸಿಲೆ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಬ್ರಹ್ಮಣ್ಯ ಎಸೈ ಕಾರ್ತಿಕ್ ನೇತೃತ್ವದ ಸುಬ್ರಹ್ಮಣ್ಯ ಪೊಲೀಸರು, ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ-ಬಿಸಿಲೆ ರಸ್ತೆಯ ಕುಲ್ಕುಂದ ಎಂಬಲ್ಲಿ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಆರೋಪಿಗಳು ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ನಡೆಸುತ್ತಿದ್ದು, ಯಾವುದೇ ಪರವಾನಗಿ ಹೊಂದಿರಲಿಲ್ಲ.
ವಿಚಾರಣೆ ವೇಳೆ ಆರೋಪಿಗಳು, ಶನಿವಾರಸಂತೆ ಕಡೆಗೆ ಜಾನುವಾರುಗಳನ್ನು ಕಡಿದು ಮಾಂಸ ಮಾಡುವವರಿಗೆ ಮಾರಾಟ ಮಾಡಲು ಸಾಗಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಜಾನುವಾರುಗಳ ಸಾಗಾಟ ನಡೆಸಿದ ಪಿಕಪ್ ವಾಹನ ಸಹಿತ ಮೂರು ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಾದ ಗಿರೀಶ್, ಸತೀಶ್ ಎಂಬವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.