December 5, 2025
WhatsApp Image 2025-06-30 at 1.15.39 PM

ಉಡುಪಿ: ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಿಜೆಪಿ ಮುಖಂಡ ಹಾಗೂ ರಟ್ಟಾಡಿ ಶ್ರೀರಕ್ಷೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ವಿರುದ್ಧ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.5ರಂದು ನಡೆಯಲಿದ್ದ ಧರ್ಮಸ್ಥಳದ ಧರ್ಮ ಸಂರಕ್ಷಣಾ ಯಾತ್ರೆಯ ಸಭೆಯ ಆಮಂತ್ರಣ ಪತ್ರಿಕೆ ನೀಡುವ ಕುರಿತು ರಟ್ಟಾಡಿ ಶ್ರೀರಟ್ಟೆಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮುಖ್ಯಸ್ಥ ಹಾಗೂ ಬಿಜೆಪಿ ಮುಖಂಡ ನವೀನಚಂದ್ರ ಶೆಟ್ಟಿ ರಟ್ಟಾಡಿ ಅವರಿಗೆ ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದ 29ರ ಹರೆಯದ ರಟ್ಟಾಡಿ ಗ್ರಾಮದ ಮಹಿಳೆ ಸೆ.2ರಂದು ಕರೆ ಮಾಡಿದ್ದರು. ಈ ವೇಳೆ ನವೀನ್‌ಚಂದ್ರ ಶೆಟ್ಟಿ ತಾನು ಮನೆಯಲ್ಲಿರುವುದಾಗಿ ಹೇಳಿದ್ದು, ಮಧ್ಯಾಹ್ನ 1ಗಂಟೆಯೊಳಗೆ ಮನೆಗೆ ಬರುವಂತೆ ತಿಳಿಸಿದರು. ಅದರಂತೆ ಮಹಿಳೆ ಮಧ್ಯಾಹ್ನ 12ಗಂಟೆಯ ಸುಮಾರಿಗೆ ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿರುವ ನವೀನ್‌ಚಂದ್ರ ಶೆಟ್ಟಿಯ ಮನೆಗೆ ಹೋಗಿದ್ದು, ಅಲ್ಲಿ ನವೀನ್ ಚಂದ್ರ ಶೆಟ್ಟಿ ಜಗುಲಿಯ ಕುರ್ಚಿಯಲ್ಲಿ ಕುಳಿತ್ತಿದ್ದರು. ಈ ವೇಳೆ ಮಹಿಳೆ ಆಮಂತ್ರಣ ಪತ್ರಿಕೆಯನ್ನು ನವೀನ್‌ಚಂದ್ರ ಶೆಟ್ಟಿಯ ಕೈಗೆ ಕೊಟ್ಟಾಗ ಆತ ಮಹಿಳೆಯ ಕೈಯನ್ನು ಸ್ವರ್ಶಿಸಿ ಆಹ್ವಾನ ಪತ್ರಿಕೆ ತೆಗೆದುಕೊಂಡನು. ಇದರಿಂದ ಮಹಿಳೆಗೆ ಮುಜುಗರ ಉಂಟಾಗಿತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಮಹಿಳೆ ಹೊರಡಲು ಸಿದ್ಧರಾದಾಗ ನವೀನ್‌ಚಂದ್ರ ಶೆಟ್ಟಿ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿ, ಮಹಿಳೆ ಕುಳಿತ ಸೋಪಾದ ಪಕ್ಕದಲ್ಲಿ ಬಂದು ಕುಳಿತು, ಮಹಿಳೆಯನ್ನು ಹತ್ತಿರಕ್ಕೆ ಎಳೆದುಕೊಂಡು ಕೆನ್ನೆಗೆ ಮುತ್ತು ಕೊಟ್ಟಿರುವುದಾಗಿ ದೂರಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಅಲ್ಲಿಂದ ತಕ್ಷಣ ಎದ್ದು ಹೊರ ಬರುತ್ತಿರುವಾಗ, ನವೀನ್‌ಚಂದ್ರ ಶೆಟ್ಟಿ, ವಾಪಾಸು ಮನೆಗೆ ಬರುವಂತೆ ಹೇಳುತ್ತಾ ಹಿಂಬಾಲಿಸಿಕೊಂಡು ಬಂದಿರುವುದಾಗಿ ದೂರಲಾಗಿದೆ.

ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಧರ್ಮಸ್ಥಳ ಯೋಜನೆಯ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಧರ್ಮಸ್ಥಳ ಸಂಘದ ಸದಸ್ಯೆಯನ್ನು ಧರ್ಮ ರಕ್ಷಣೆಯ ಕೆಲಸದ ಮೇಲೆ ಶುಕ್ರವಾರ ಮನೆಗೆ ಕರೆಯಿಸಿ ಮಾನಭಂಗಕ್ಕೆ ಯತ್ನಿಸಿರುವುದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.

ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಲಿ ಅವರು ಆರೋಪಿ ನವೀನ್ ಚಂದ್ರಶೆಟ್ಟಿ ಪರ ನಿಂತು ಪಂಚಾಯಿತಿ ಮಾಡಲು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿರುವುದು ತಿಳಿದುಬಂದಿದೆ. ಇದು ಖಂಡನೀಯವಾಗಿದ್ದು, ಆರೋಪಿ ನವೀನ್ ಚಂದ್ರ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಸ್ವತಃ ಸಂತ್ರಸ್ತ ಮಹಿಳೆಯೇ ದೂರು ನೀಡಿರುವುದರಿಂದ ತಕ್ಷಣವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಆ ಮೂಲಕ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.