
ಮಂಗಳೂರಿನ ಪಿವಿಎಸ್ ವೃತ್ತದ ಬಳಿ ಇರುವ ಅಪಾರ್ಟ್ಮೆಂಟ್‌ನ ಮನೆಯೊಂದರಲ್ಲಿ ಸುಮಾರು 53 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವ ಬಗ್ಗೆ ಕದ್ರಿಯ ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಮಾಲೀಕ ಜಗದೀಶ್ ಎನ್ನುವವರು ಕದ್ರಿ ಪೊಲೀಸ್ ಠಾಣೆಗೆ ನೀಡಿರುವ ದೂರನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಗದೀಶ್ ಅವರು ಮಕ್ಕಳೊಂದಿಗೆ ಉದ್ಯೋಗ ಸಲುವಾಗಿ ಕತಾರ್‌ನಲ್ಲಿ ವಾಸವಿದ್ದಾರೆ. ಅವರ ಪತ್ನಿ ಮೌರಿಷ್ಕಾ ಪಾರ್ಕ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಆಕೆಯ ಅಕ್ಕನ ಮಗನ ಜೊತೆ ವಾಸವಿದ್ದರು. ಅನಾರೋಗ್ಯದ ಕಾರಣ ಅವರು ಜುಲೈ ಕೊನೆಯ ವಾರದಿಂದ ತವರು ಮನೆಯಲ್ಲಿ ವಾಸವಾಗಿದ್ದಾರೆ.
ಅಪಾರ್ಟ್ಮೆಂಟ್ ಸಮುಚ್ಚಯದ ಮನೆಯಲ್ಲಿ ಜಗದೀಶ್ ಅವರ ಪತ್ನಿಯ ಅಕ್ಕನ ಮಗ ಮಾತ್ರ ವಾಸವಾಗಿದ್ದ. ಅಕ್ಕನ ಮಗನ ಬಳಿ ಆ ಮನೆಯಲ್ಲಿದ್ದ ಚಿನ್ನಾಭರಣಗಳ ಬಾಕ್ಸ್ ಅನ್ನು ತರುವಂತೆ ಹೇಳಲಾಗಿತ್ತು. ಈ ವೇಳೆ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಬಾಕ್ಸ್ ಕಾಣೆಯಾಗಿತ್ತು.
ಬಾಕ್ಸ್ನಲ್ಲಿ 21 ಗ್ರಾಂ ತೂಕದ ಒಂದು ಜೊತೆ ಚಿನ್ನದ ಬಳೆಗಳು, 12 ಗ್ರಾಂ ತೂಕದ ಬ್ರಾಸ್ಲೆಟ್, ಒಟ್ಟು 20 ಗ್ರಾಂ ತೂಕದ ನಾಲ್ಕು ಜೊತೆ ಬೆಂಡೋಲೆಗಳು (ವಜ್ರ, ಹವಳ, ಕಲ್ಲುಗಳನ್ನು ಅಳವಡಿಸಿದ್ದು) ಇದ್ದವು. ಅವುಗಳ ಒಟ್ಟು ಮೌಲ್ಯ 9.46 ಲಕ್ಷ ಎಂದು ಅಂದಾಜಿಸಲಾಗಿದೆ. ಜಗದೀರ್ಶ ಅವರ ಮನೆ ಕೆಲಸದಾಕೆ ಜುಲೈನಿಂದ ಕೆಲಸಕ್ಕೆ ಬಂದಿಲ್ಲ.
ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಆಕೆಯೇ ಚಿನ್ನಾಭರಣಗಳಿದ್ದ ಬಾಕ್ಸ್ ಅನ್ನು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಮನೆಯ ಮಾಲೀಕ ಜಗದೀಶ್ ಯು.ಎಸ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
