ಮಂಗಳೂರು: ಬಿಜೆಪಿ ಯುವ ಮುಖಂಡ, ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರನ್ನು ಪತ್ತೆಹಚ್ಚಲು ಸಹಾಯ ನೀಡುವವರಿಗೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ನಗದು ಬಹುಮಾನ ಘೋಷಿಸಿದೆ.
ಸುಳ್ಯ ಬುದು ಹೌಸ್‌ನ ಎಸ್. ಮುಹಮ್ಮದ್ ಮುಸ್ತಫ ಯಾನೆ ಮುಸ್ತಫ ಪೈಚಾರ್ ಮತ್ತು ಮಡಿಕೇರಿಯ ಎಂ.ಎಚ್. ತೌಫಲ್ ಕುರಿತು ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ನೀಡಲಾಗುವುದು.
ದಕ್ಷಿಣ ಕನ್ನಡದ ಕಲ್ಲುಮುಟ್ಟಲು ವೀಟಿಲ್ ಎಂ.ಆರ್. ಉಮ್ಮರ್ ಫಾರೂಕ್ ಯಾನೆ ಉಮ್ಮರ್, ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್ ಯಾನೆ ಗುಜರಿ ಸಿದ್ದಿಕ್ ಕುರಿತು ಮಾಹಿತಿ ನೀಡುವವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ನೊಟೀಸ್‌ನಲ್ಲಿ ತಿಳಿಸಿದೆ.
ಆರೋಪಿಗಳು ಕೇರಳದಲ್ಲಿ ತಲೆಮರೆಸಿಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ನೊಟೀಸಿನ ಪ್ರತಿಗಳನ್ನು ಕಲ್ಲಿಕೋಟೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಲಗತ್ತಿಸಲಾಗಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು