
ಬಂಟ್ವಾಳ: ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ್ದ ರಮಾನಂದ ಅವರದು ಆತ್ಮಹತ್ಯೆ ಅಲ್ಲ, ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ ಸಂಶಯವಿದ್ದು,ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ತಾಯಿ ಜಾನಕಿ ಅವರು ವಾಮಂಜರೂರು ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಎಂಬಾತ ನ.25 ರಂದು ನಾಪತ್ತೆಯಾಗಿದ್ದ , ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಾಗಿತ್ತು.
ಈ ಮಧ್ಯೆ ಅದೇ ದಿನ ಮಧ್ಯಾಹ್ನದ ವೇಳೆ ಈತನ ಮೃತದೇಹ ಮಂಗಳೂರು ತಾಲೂಕಿನ ವಾಮಂಜೂರು ಕೆತ್ತಿಕಲ್ಲು ಎಂಬಲ್ಲಿ ಪತ್ತೆಯಾಗಿದೆ. ರಮಾನಂದ ಅವರ ಮೃತದೇಹ ಕೆತ್ತಿಕಲ್ಲು ಎಂಬಲ್ಲಿ ಗುಡ್ಡದಲ್ಲಿ ಮರದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇತ್ತು, ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜರೂ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಆದರೆ ಮನೆಯವರಿಗೆ ಈತನ ಸಾವಿನ ಬಗ್ಗೆ ಸಂಶಯವಿದ್ದು, ಇದೊಂದು ವ್ಯವಸ್ಥಿತ ರೀತಿಯ ಕೊಲೆಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಇದೀಗ ತಾಯಿ ಠಾಣೆಯ ಮೆಟ್ಟಿಲು ಏರಿದ್ದಾರೆ.
ರಮಾನಂದ ಅವರಿಗೆ ಕಳೆದ ಮೂರು ವರ್ಷಗಳಿಂದ ವಾಮಂಜೂರು ಭಾಗದ ಹುಡುಗಿ ಜೊತೆ ಪ್ರೀತಿ ಇತ್ತು, ಕೆಲ ದಿನಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಕುಟುಂಬಿಕರು ಈತನಿಗೆ ಬೆದರಿಕೆ ಹಾಕಿದ್ದಾರೆ ಎಂಬ ದೂರು ಮನೆಯವರದ್ದು. ಹಾಗಾಗಿ ಹುಡುಗಿಯ ಜೊತೆ ಮನೆಯವರು ಸೇರಿ ಈತನನ್ನು ಕೊಲೆ ಮಾಡಿದ್ದಾರೆ ಎಂಬ ದೂರನ್ನು ತಾಯಿ ಜಾನಕಿ ಅವರು ನೀಡಿದ್ದು,ನ್ಯಾಯಕ್ಕಾಗಿ ಪೋಲೀಸ್ ಮೊರೆ ಹೋಗಿದ್ದಾರೆ.
