ನಾರಾವಿ, ಎ. 21: ಬಡವರ ಆರೋಗ್ಯ ಕ್ಷೇಮ ನೋಡಿಕೊಳ್ಳುತ್ತಿದ್ದ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ ವೈದ್ಯರೇ ಇಲ್ಲ !
ಕಳೆದ ಜನವರಿಯಲ್ಲಿ ಇಲಾಖೆಯಿಂದ ಉನ್ನತ ವ್ಯಾಸಂಗಕ್ಕೆ ತೆರಳಿರುವ ಇಲ್ಲಿಯ ವೈದ್ಯೆ ಡಾ. ದೀಕ್ಷಿತಾರವರ ತೆರವಾದ ಬಳಿಕ ನಾಲ್ಕು ತಿಂಗಳಿನಿಂದ ಇಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಇದರಿಂದಾಗಿ ಇಲ್ಲಿಯ ಬಡ ಜನತೆ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವಂತಾಗಿದೆ.
2017ರಲ್ಲಿ ಇಲ್ಲಿ ನಿಯೋಜನೆಗೊಂಡಿದ್ದ ವೈದ್ಯಾಧಿಕಾರಿ ಡಾ. ದೀಕ್ಷಿತಾ ಅವರು ವೈದ್ಯಕೀಯ ಚಿಕಿತ್ಸೆಯಲ್ಲಿ ಹೆಸರು ಪಡೆದಿದ್ದರು. ಇದೀಗ ನಾಲ್ಕು ತಿಂಗಳಿನಿಂದ ವೈದ್ಯರ ಸ್ಥಾನ ತೆರವಾಗಿದೆ. ಇದೀಗ ವಾರದಲ್ಲಿ ಒಂದು ದಿನ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್‌ಕುಮಾರ್ ಅವರು ಇಲ್ಲಿ ಕರ್ತವ್ಯ ನಿರ್ವಹಿಸುದ್ದಾರೆ. ಆದರೆ ಇನ್ನಿತ್ತರ ದಿನಗಳಲ್ಲಿ ಇಲ್ಲಿ ವೈದ್ಯರಿಲ್ಲದೆ ಜನರಿಗೆ ಸೇವೆ ಸಿಗುತ್ತಿಲ್ಲ!
ಖಾಲಿಯಿದೆ ಇತರ ಹುದ್ದೆಗಳು
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಆರೋಗ್ಯ ಸುರಕ್ಷಣಾಧಿಕಾರಿ ಮೂರು ಹುದ್ದೆ, ಶುಶ್ರೂಶಕಿ, ಕ್ಲರ್ಕ್ ಹುದ್ದೆ ಸೇರಿದಂತೆ ಫಾರ್ಮಸಿಸ್ಟ್ ಹುದ್ದೆಗಳು ಖಾಲಿಯಿವೆ. ಇಲ್ಲಿಯ ೪ ಮಂದಿ ಸಮುದಾಯ ಆರೋಗ್ಯ ಅಧಿಕಾರಿಗಳಲ್ಲಿ ಮೂರು ಮಂದಿ ಸ್ಥಳೀಯ ವಿವಿಧ ಉಪಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಕ್ರಾಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಸಮುದಾಯ ಆರೋಗ್ಯ ಅಧಿಕಾರಿ ಅಲ್ಲಿ ಕಟ್ಟಡದ ಕೊರತೆಯಿಂದ ಆಸ್ಪತ್ರೆಯಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ. ಒಟ್ಟಿನಲ್ಲಿ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತುರ್ತಾಗಿ ವೈದ್ಯಾಧಿಕಾರಿ ಹುದ್ದೆಯನ್ನು ಇಲಾಖೆ ಭರ್ತಿ ಮಾಡಬೇಕಿದೆ ಅನ್ನುವ ಅಭಿಪ್ರಾಯ ಇಲ್ಲಿನ ಜನತೆಯದ್ದು.