ಉಳ್ಳಾಲ: ಶನಿವಾರ ತಡರಾತ್ರಿ ಕುತ್ತಾರು ದೇವಸ್ಥಾನ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೊಕ್ಕೊಟ್ಟು ಸೇವಂತಿಗುತ್ತು ನಿವಾಸಿ ಭೂಷಣ್ ರೈ ಮಿದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಅಂಗಾಂಗ ದಾನ ನೀಡಲು ಮುಂದಾಗಿದ್ದಾರೆ.
ಅಪಘಾತ ನಂತರ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಗಾಯಾಳು ಮಿದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದ್ದಾರೆ. ಸಂಜೆ 4 ಗಂಟೆ ನಂತರ ನಡೆದ ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.
ಮೃತ ಭೂಷಣ್ ಸಹೋದರಿಯ ವಿವಾಹ ಎರಡು ವಾರಗಳ ಹಿಂದೆಯಷ್ಟೇ ನೆರವೇರಿತ್ತು. ತಂದೆ ಮಾರಪ್ಪ ರೈ ವರ್ಷದ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಮೃತ ಭೂಷಣ್ ತಾಯಿ ಜತೆಗೆ ನೆಲೆಸಿದ್ದರು.
ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಗೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿತ್ತು. ಕಲ್ಲಾಪು ಬುರ್ದುಗೋಳಿ ಕೋಲದಲ್ಲಿ ಭಾಗವಹಿಸಿ ಬೈಕಿನಲ್ಲಿ ಕುತ್ತಾರಿನತ್ತ ಬರುವ ಸಂದರ್ಭ ಬೈಕ್ ಡಿವೈಡರಿಗೆ ಬಡಿದಿದ್ದು, ಪರಿಣಾಮ ಭೂಷಣ್ ಇನ್ನೊಂದು ರಸ್ತೆಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಕೆಲಕಾಲ ಬಿದ್ದಿದ್ದ ಅವರನ್ನು ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಕೇರಳದ ಆಲ್ಟೋ ಕಾರಿನಲ್ಲಿದ್ದ ಐವರ ತಂಡ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.