ಸಮುದ್ರದಲ್ಲಿ ಹೃದಯಾಘಾತಕ್ಕೊಳಗಾದ ಮೀನುಗಾರನ ರಕ್ಷಣೆ ಮಾಡಿದ ಕರಾವಳಿ ರಕ್ಷಣಾ ಪಡೆ

ಮಂಗಳೂರು: ಮೀನುಗಾರಿಕೆಗೆಂದು ತೆರಳಿದ್ದಾಗ ಸಮುದ್ರದಲ್ಲಿಯೇ ಹೃದಯಾಘಾತಕ್ಕೊಳಗಾದ ಮೀನುಗಾರರೊಬ್ಬರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ಒದಗಿಸಿದ ಕರಾವಳಿ ರಕ್ಷಣಾ ಪಡೆ ತಕ್ಷಣ ನವಮಂಗಳೂರು ಬಂದರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಪಡೆಯಲು ನೆರವಾಗಿದೆ. ‘ಬೇಬಿ ಮೇರಿ-4’ ದೋಣಿಯಲ್ಲಿ ಮೀನುಗಾರಿಕೆಂದು ತೆರಳಿದ್ದ ವಸಂತ ಎಂಬ ಮೀನುಗಾರ ಪಣಂಬೂರು ತೀರದಿಂದ ಸುಮಾರು 36 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಮುದ್ರದಲ್ಲಿದ್ದರು. ಆದರೆ ಮಂಗಳವಾರ ಮಧ್ಯಾಹ್ನ 3.20ರ ವೇಳೆಗೆ ಅವರಿಗೆ ತೀವ್ರ ಎದೆನೋವು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮತ್ತೊಂದು ಮೀನುಗಾರಿಕಾ ದೋಣಿಯ ಮೀನುಗಾರರು ಈ ಬಗ್ಗೆ ಕರ್ನಾಟಕದ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿ ತುರ್ತು ನೆರವು ಕೋರಿದ್ದಾರೆ. ತಕ್ಷಣ ಕರಾವಳಿ ರಕ್ಷಣಾ ಪಡೆ ಸಾಗರ ರಕ್ಷಣಾ ಉಪಕೇಂದ್ರವನ್ನು ಸನ್ನದ್ಧಗೊಳಿಸಿ, ತನ್ನೆಲ್ಲ ನೌಕೆಗಳಿಗೆ ತುರ್ತು ರಕ್ಷಣೆಯ ಅಗತ್ಯದ ಕುರಿತ ಸಂದೇಶ ರವಾನಿಸಲಾಗಿದೆ. ಈ ದೋಣಿಗೆ ಸಮೀಪದಲ್ಲಿದ್ದ ಕರಾವಳಿ ರಕ್ಷಣಾ ತಡೆಯ ಇಂಟರ್‌ಸೆಪ್ಟ್ ದೋಣಿ ಸಿ- 446, ವಸಂತ ಅವರಿದ್ದ ದೋಣಿಯತ್ತ ಧಾವಿಸಿದೆ. ತಕ್ಷಣ ಅದರಲ್ಲಿದ್ದ ಸಿಬ್ಬಂದಿ ವಸಂತರ ಆರೋಗ್ಯ ತಪಾಸಣೆ ನಡೆಸಿ, ಪ್ರಥಮ ಚಿಕಿತ್ಸೆ ಒದಗಿಸಿದರು. ಹೆಚ್ಚಿನ ಚಿಕಿತ್ಸೆ ಸಲುವಾಗಿ ಆ ಮೀನುಗಾರರನ್ನು ಅದೇ ದೋಣಿಯಲ್ಲಿ ಪಣಂಬೂರಿನ ನವಮಂಗಳೂರು ಬಂದರಿನ ದಕ್ಕೆಗೆ ಕರೆತಂದರು. ಬಳಿಕ ಹೃದಯಾಘಾತಕ್ಕೊಳಗಾದ ವಸಂತ ಅವರನ್ನು ನಗರದ ಬೆಂದೂರುವೆಲ್‌ನ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ವೈದ್ಯಕೀಯ ನೆರವು ಒದಗಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

Check Also

ಉಳ್ಳಾಲ: ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯ ಮೃತದೇಹ ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಇಂದು ಪತ್ತೆಯಾದ ಘಟನೆ ಕೊಲ್ಯ ,ಕುಜುಮಗದ್ದೆಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.