
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ಕೇರಳ ಮೂಲದ ಭಕ್ತೆಯೊಬ್ಬರಿಂದ ಕಳುವಾಗಿದ್ದ ಎರಡು ಚಿನ್ನದ ಸರ ಮತ್ತು ನಗದು ಇದ್ದ ಪರ್ಸ್ ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಕೊಲ್ಲೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧವಾರ ದೇವಸ್ಥಾನದ ಆವರಣದಲ್ಲಿ ಈ ಕಳ್ಳತನ ನಡೆದಿತ್ತು. ತಮ್ಮ ವಸ್ತುಗಳು ನಾಪತ್ತೆಯಾಗಿರುವುದನ್ನು ಗಮನಿಸಿದ ಭಕ್ತರು ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಕಳುವಾದ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ.
ವಸ್ತುಗಳು ಮರಳಿ ಸಿಕ್ಕಿದ ಬಳಿಕ, ಪೊಲೀಸರು ಅವುಗಳನ್ನು ಕೇರಳದ ಭಕ್ತೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. ತಮ್ಮ ಒಡವೆಗಳನ್ನು ಮರಳಿ ಪಡೆದ ಭಕ್ತೆ ನಿಟ್ಟುಸಿರು ಬಿಟ್ಟಿದ್ದಾರೆ. ಕೊಲ್ಲೂರು ಪಿಎಸ್‌ಐ ಭೀಮಾಶಂಕರ್ ಅವರ ನೇತೃತ್ವದ ಪೊಲೀಸ್ ತಂಡ ಈ ಮಿಂಚಿನ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
