
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಗೆ ಬರೋಬ್ಬರಿ 2.1 ಕೋಟಿ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಂತ್ರಸ್ತರಿಗೆ ಏಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿ, ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್ನ ನಿಷೇಧಿತ ಪಿಎಫ್ಐ (PFI) ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ. ಅಲ್ಲದೆ ತನ್ನನ್ನು ಎನ್ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.
ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ವಂಚಕರು ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್ಗಳನ್ನು ಮಾಡಿ ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದು, ಆರೋಪಿ ಪ್ರದೀಪ್ ಜಸ್ವಾಲ್ ಎಂದು ತನನ್ನು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಆತ, ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಸಿಕ್ಕಿದೆ.
ನಂತರ ಹಣದ ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಅದೇ ಬಂಧನ ತಪ್ಪಿಸಿಕೊಳ್ಳುವ ಮಾರ್ಗ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ಮಹಿಳೆ ತನ್ನ ಜೀವಮಾನ ಉಳಿತಾಯವನ್ನು ನೀಡಿದ್ದಾರೆ. ಸಾಲದ್ದಕ್ಕೆ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದು ಅದರ ಹಣವನ್ನೂ ಆರೋಪಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ಹಲವು ಆರ್ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು 2.1 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ಹಾಕಿರೋದು ಗೊತ್ತಾಗಿದೆ.
ಇಷ್ಟಾದರೂ ಆರೋಪಿಗಳ ಹಣದ ದಾಹ ತೀರದ ಕಾರಣ ಮೇ 2ರಂದು ಮಹಿಳೆ ತಮ್ಮ ಸಹೋದರರ ಬಳಿ ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ಅವರು ವಿಚಾರಿಸಿದಾಗ ವಂಚನೆ ಬಯಲಾಗಿದೆ. ಆ ಬಳಿಕ ಮಹಿಳೆ 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
