
ಬೆಂಗಳೂರು : ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ತಲೆ ಸುತ್ತಿ ಬಿದ್ದ ವಿದ್ಯಾರ್ಥಿಯ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಶನಿವಾರ ನಡೆದಿದೆ. ವರುಣ್ (16) ಮೃತಪಟ್ಟ ದುರ್ದೈವಿ.
ಇತ್ತೀಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ ವರುಣ್, ಅನಾರೋಗ್ಯ ಪೀಡಿತ ತಂದೆಗೆ ಔಷಧಿ ತರಲು ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ರಸ್ತೆ ದಾಟುತ್ತಿದ್ದನು. ಈ ವೇಳೆ ವೈಟ್ ಟ್ಯಾಪಿಂಗ್ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಿದ್ದು, ರಸ್ತೆ ದಾಟಲು ಕಾದು ಸುಸ್ತಾದ ವರುಣ್ ತಲೆ ಸುತ್ತಿ ಬಿದ್ದಿದ್ದಾನೆ. ಅದೇ ಸಮಯದಲ್ಲಿ ವೇಗವಾಗಿ ಬಂದ ಖಾಸಗಿ ಬಸ್ ಆತನ ತಲೆಯ ಮೇಲೆ ಹರಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
