
ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ನೌಫಿಲ್ ಹಾಗೂ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಹಾನ್ ಪೂಜಾರಿ ಎಂಬುವರನ್ನು ಗಡಿಪಾರು ಮಾಡಿ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪೈಕಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ಕಳತ್ತೂರು ನಿವಾಸಿ ಮಹಮ್ಮದ್ ನೌಫಿಲ್ ಈತನ ವಿರುದ್ಧ 5 ಪ್ರಕರಣ ದಾಖಲಾಗಿದ್ದು ಶಿರ್ವ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿರುತ್ತದೆ. ಅಂತೆಯೇ ಮಲ್ಪೆ ಠಾಣಾ ವ್ಯಾಪ್ತಿಯ ನಿವಾಸಿ ಸುಹಾನ್ ಪೂಜಾರಿ ವಿರುದ್ಧ 4 ಪ್ರಕರಣ ದಾಖಲಾಗಿರುತ್ತದೆ. ಮಹಮ್ಮದ್ ನೌಫಿಲ್‌ನನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಸುಹಾನ್ ಪೂಜಾರಿಯನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
