March 20, 2026
WhatsApp Image 2026-01-23 at 9.18.59 AM

ಮಂಗಳೂರು: ಕಳೆದ 29 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ‘ದಂಡುಪಾಳ್ಯ ಗ್ಯಾಂಗ್’ನ ಸಕ್ರಿಯ ಸದಸ್ಯ ಚಿಕ್ಕ ಹನುಮ ಅಲಿಯಾಸ್ ಹನುಮಂತಪ್ಪನನ್ನು ಮಂಗಳೂರಿನ ಉರ್ವಾ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯ ಹಿನ್ನೆಲೆ
1997ರಲ್ಲಿ ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಪ್ರಕರಣದ ಬಳಿಕ ತನ್ನ ಹೆಸರನ್ನು ‘ಕೆ. ಕೃಷ್ಣಪ್ಪ’ ಎಂದು ಬದಲಾಯಿಸಿಕೊಂಡಿದ್ದ ಈತ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆಯಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದ ತಂಡ ಆರೋಪಿಯನ್ನು ಸೆರೆಹಿಡಿದು ಮಂಗಳೂರಿಗೆ ಕರೆತಂದಿದೆ.

ದಿನಾಂಕ 11-10-1997ರ ಮಧ್ಯರಾತ್ರಿ ಉರ್ವಾ ಮಾರಿಗುಡಿ ಕ್ರಾಸ್ ಬಳಿಯ ‘ಅನ್ವರ್ ಮಹಲ್’ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್‌ನ 8 ಮಂದಿ ಸದಸ್ಯರು, ಮನೆಯಲ್ಲಿದ್ದ 80 ವರ್ಷದ ವೃದ್ಧೆ ಲೂವಿಸ್ ಡಿಮೆಲ್ಲೋ ಹಾಗೂ 19 ವರ್ಷದ ಯುವಕ ರಂಜಿತ್ ವೇಗಸ್ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೆ ಚಿಕ್ಕ ಹನುಮ ಮಾತ್ರ ನ್ಯಾಯಾಲಯಕ್ಕೆ ಹಾಜರಾಗದೆ ಅಲೆಮಾರಿಯಾಗಿದ್ದ. ಈತನ ವಿರುದ್ಧ 2010ರಲ್ಲಿ ಎಲ್‌ಪಿಸಿ (LPC) ವಾರೆಂಟ್ ಜಾರಿಯಾಗಿತ್ತು.

13 ಕೊಲೆ ಪ್ರಕರಣಗಳಲ್ಲಿ ಭಾಗಿ
ಬಂಧಿತ ಚಿಕ್ಕ ಹನುಮನ ಮೇಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸುಮಾರು 13ಕ್ಕೂ ಹೆಚ್ಚು ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.