March 22, 2026
WhatsApp Image 2025-09-24 at 9.43.36 AM

ಮಂಗಳೂರು: ಪಾಸ್‌ಪೋರ್ಟ್‌ ಅರ್ಜಿಯ ಪೊಲೀಸ್‌ ಪರಿಶೀಲನಾ ವರದಿಯಲ್ಲಿ ವಂಚನೆ ಎಸಗಿ, ಸಹಿ ಫೋರ್ಜರಿ ಮಾಡಿದ ಆರೋಪದಡಿ ವಿಟ್ಲ ಪೊಲೀಸ್‌ ಠಾಣೆಯ ಸಿಬ್ಬಂದಿ ಪ್ರದೀಪ್‌ ಹಾಗೂ ಸುಳ್ಳು ದಾಖಲೆ ನೀಡಿ ಪಾಸ್‌ಪೋರ್ಟ್‌ ಪಡೆದ ಶಕ್ತಿ ದಾಸ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶಕ್ತಿ ದಾಸ್‌ ಎಂಬಾತ ಫೆಬ್ರವರಿ 2025ರಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದನು. ಆದರೆ ಪೊಲೀಸ್‌ ವೆರಿಫಿಕೇಶನ್‌ ವೇಳೆ ಆತ ನೀಡಿದ್ದ ವಿಳಾಸವು ದಾಖಲಾತಿಗಳಿಗೆ ತಾಳೆಯಾಗದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ತದನಂತರ ಜೂನ್‌ನಲ್ಲಿ ಆತ ಮತ್ತೆ ಮರು ಅರ್ಜಿ ಸಲ್ಲಿಸಿದ್ದನು.

ಈ ಮರು ಅರ್ಜಿಯ ಪರಿಶೀಲನೆಯ ಹೊಣೆ ಹೊತ್ತಿದ್ದ ಠಾಣಾ ಸಿಬ್ಬಂದಿ ಪ್ರದೀಪ್‌, ಸಂಬಂಧಪಟ್ಟ ಬೀಟ್‌ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಗಮನಕ್ಕೆ ಬಾರದಂತೆ ಅವರ ಹೆಸರಿನಲ್ಲೇ ನಕಲಿ ವರದಿ ಸಿದ್ಧಪಡಿಸಿದ್ದರು. ಅಷ್ಟೇ ಅಲ್ಲದೆ, ಸಾಬು ಮಿರ್ಜಿ ಅವರ ಸಹಿಯನ್ನು ಫೋರ್ಜರಿ ಮಾಡಿ ಮೇಲಾಧಿಕಾರಿಗಳಿಂದ ಶಿಫಾರಸ್ಸು ಮಾಡಿಸಿ ಪಾಸ್‌ಪೋರ್ಟ್‌ ಹಾಗೂ ಪೊಲೀಸ್‌ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಸಿಗುವಂತೆ ಮಾಡಿದ್ದರು. ಬಳಿಕ ಈ ಅಕ್ರಮ ಯಾರಿಗೂ ತಿಳಿಯಬಾರದೆಂದು ಸಂಬಂಧಪಟ್ಟ ಕಡತಗಳನ್ನು ನಾಶಪಡಿಸಿದ್ದರು ಎನ್ನಲಾಗಿದೆ.

ಡಿಸೆಂಬರ್ 19 ರಂದು ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಈ ಗಂಭೀರ ಲೋಪ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಪ್ರಮುಖ ಗುರುತಿನ ಚೀಟಿಯಾದ ಪಾಸ್‌ಪೋರ್ಟ್‌ ಪಡೆಯಲು ಅಪರಾಧಿಕ ನಂಬಿಕೆ ದ್ರೋಹ ಎಸಗಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪ್ರದೀಪ್‌ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.