March 20, 2026
WhatsApp Image 2025-12-19 at 5.00.54 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.21ರಂದು ನಡೆಯಲಿರುವ 2025ನೇ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಪಲ್ಸ್ ಪೋಲಿಯೊ ಲಸಿಕೆ ನೀಡಲು ಜಿಲ್ಲೆಯಲ್ಲಿ 921 ಸ್ಥಿರ ಬೂತ್, 32 ಟ್ರಾನ್ಸಿಟ್, ಮಂಗಳೂರು ನಗರದಲ್ಲಿ ಮೂರು ಮೊಬೈಲ್ ಬೂತ್ ಸೇರಿದಂತೆ 956 ಬೂತ್‌ಗಳಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು. ಐದು ವರ್ಷಕ್ಕಿಂತ ಕೆಳಗಿನ 29,203 ಮಕ್ಕಳಿಗೆ ಬಂಟ್ವಾಳದಲ್ಲಿ , ಬೆಳ್ತಂಗಡಿಯಲ್ಲಿ 18,091, ಮಂಗಳೂರಿನಲ್ಲಿ 66, 062, ಪುತ್ತೂರಿನಲ್ಲಿ 19, 958 ಮತ್ತು ಸುಳ್ಯದಲ್ಲಿ 8,280 ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.

ಲಸಿಕೆ ನೀಡಿಕೆಗೆ ಬಂಟ್ವಾಳದಲ್ಲಿ 202 ಬೂತ್, ಬೆಳ್ತಂಗಡಿ 166, ಮಂಗಳೂರಿನಲ್ಲಿ 363, ಪುತ್ತೂರಿನಲ್ಲಿ 148, ಸುಳ್ಯದಲ್ಲಿ 77 ಬೂತ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಟ್ರಾನ್ಸಿಟ್ ತಂಡಗಳು ಮಕ್ಕಳಿಗೆ ಲಸಿಕೆ ನೀಡಲಿದೆ. ಡಿ.21ರಂದು ಬೆಳಗ್ಗೆ 8ರಿಂದ 5ರ ವರೆಗೆ 0-5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ 2 ಜೀವ ರಕ್ಷಕ ಪೋಲಿಯೊ ಲಸಿಕೆ ನೀಡಲಾಗುವುದು.

ಯಾವುದೇ ಒಂದು ಮಗು ಲಸಿಕೆ ವಂಚಿತವಾಗಬಾರದು ಎಂಬ ಉದ್ದೇಶದೊಂದಿಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು. ಒಂದು ವೇಳೆ ಆ ದಿನ ಲಸಿಕೆ ಪಡೆಯಲು ಸಾಧ್ಯವಾಗದಿರುವ ಮಕ್ಕಳಿಗೆ ಡಿ.22, 23 ಮತ್ತು 24ರಂದು ಜಿಲ್ಲೆ ನಗರ ಪ್ರದೇಶಗಳಲ್ಲಿ , ಡಿ.22 ಮತ್ತು ಡಿ.23ರಂದು ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಪಲ್ಸ್ ಪೋಲಿಯೊ ಲಸಿಕೆ ಕೊಡಿಸಲಾಗುವುದು ಎಂದು ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.