
ಉಡುಪಿ: ರಸ್ತೆಯ ಗುಂಡಿಗೆ ಬಿದ್ದು ನಿಯಂತ್ರಣ ಕಳೆದುಕೊಂಡ ಟಿಪ್ಪರೊಂದು ಮರಕ್ಕೆ ಢಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಚೇರ್ಕಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ಟಿಪ್ಪರ್ ಚಾಲಕ ಶ್ರೀಕಾಂತ್(26) ಎಂದು ಗುರುತಿಸಲಾಗಿದೆ. ಈ ವಾಹನವು ನಿಟ್ಟೂರಿನ ರಂಜನ್ ಶೆಟ್ಟಿ ಅವರಿಗೆ ಸೇರಿದ್ದು, ಜಲ್ಲಿ ಲೋಡ್ ಮಾಡಲು ಶ್ರೀಕಾಂತ್ ಅವರು ನಿಟ್ಟೂರಿನಿಂದ ಹೊರಟಿದ್ದರು.
ಚೇರ್ಕಾಡಿ ಗ್ರಾಮದ ಪೇತ್ರಿ-ಮಡಿ ರಸ್ತೆಯಲ್ಲಿ ಟಿಪ್ಪರ್ ಸಂಚರಿಸುತ್ತಿದ್ದಾಗ, ರಸ್ತೆಯ ತಿರುವಿನಲ್ಲಿ ಇದ್ದ ಗುಂಡಿಗೆ ಟಿಪ್ಪರ್ ಬಿದ್ದಿದೆ. ಇದರಿಂದ ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆಯ ಬಲ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಶ್ರೀಕಾಂತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
