
ಕೊಲ್ಲೂರು : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು 24 ಗಂಟೆಗಳ ಒಳಗಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಬ0ಧಿತ ಆರೋಪಿಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ. ಆಕೆಯಿಂದ ಕಳವುಗೈದ 2.5ಲಕ್ಷ ರೂ. ಮೌಲ್ಯದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.೨೬ರಂದು ರಾತ್ರಿ 9 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ದೇವಿಪ್ರಿಯಾ ಎಂಬವರ ಬ್ಯಾಗ್ನಲ್ಲಿದ್ದ 2.5 ಲಕ್ಷ ರೂ. ಮೌಲ್ಯದ 3 ಪವನ್ನ ಹವಳದ ಚಿನ್ನದ ಸರ ಕಳವಾಗಿತ್ತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ಮತ್ತು ತಾಂತ್ರಿಕ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಕೊಲ್ಲೂರು ಪೊಲೀಸ್ ಉಪನಿರೀಕ್ಷಕರು ಸುಧಾರಾಣಿ ಟಿ. ಹಾಗೂ ಸಿಬ್ಬಂದಿ ರಾಮ ಪೂಜಾರಿ, ನಾಗೇಂದ್ರ, ಸುರೇಶ್, ನರಸಿಂಹ, ರಾಘವೇಂದ್ರ, ವಾಸಂತಿ ಹಾಗೂ ಸಂತೋಷ ಪಾಲ್ಗೊಂಡಿದ್ದರು
